Sunday, 2 January 2022

ಪಶ್ಚಿಮ ಬಂಗಾಳ: ನಾಳೆಯಿಂದ ಶಾಲೆಗಳು ಬಂದ್‌, ಕಚೇರಿಗಳಲ್ಲಿ 50% ನೌಕರರಿಗೆ ಅವಕಾಶ

ಪಶ್ಚಿಮ ಬಂಗಾಳ: ನಾಳೆಯಿಂದ ಶಾಲೆಗಳು ಬಂದ್‌, ಕಚೇರಿಗಳಲ್ಲಿ 50% ನೌಕರರಿಗೆ ಅವಕಾಶ

ಕೋಲ್ಕತ್ತ: ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಮತ್ತೆ ಕಟ್ಟುನಿಟ್ಟಿನ ಕೊರೋನಾ ನಿಯಮಗಳನ್ನು ಜಾರಿಗೊಳಿಸಿದೆ. 

ರವಿವಾರ ಕೋವಿಡ್‌ ನಿರ್ಬಂಧಗಳನ್ನು ಮತ್ತೆ ವಿಧಿಸಿದ್ದು, ಸೋಮವಾರದಿಂದ ಶಾಲಾ ಕಾಲೇಜುಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ. ಜಿಮ್‌, ಸಾರ್ವಜನಿಕ ಈಜುಕೊಳ, ಸ್ಪಾ ಹಾಗೂ ಬ್ಯೂಟಿ ಪಾರ್ಲರ್‌ ಗಳನ್ನು ಮುಚ್ಚುವಂತೆ ಆದೇಶಿಸಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ 50% ಹಾಜರಾತಿಗೆ ಸೂಚಿಸಲಾಗಿದ್ದು, ವರ್ಕ್‌ ಫ್ರಂ ಹೋಮ್‌ ಗೆ ಹೆಚ್ಚಿನ ಒತ್ತು ನೀಡಲು ಪ್ರೋತ್ಸಾಹಿಸುತ್ತಿದೆ. 

ಹರ್ಯಾಣ, ದಿಲ್ಲಿ, ಉತ್ತರಪ್ರದೇಶ ನೈಟ್‌ಕರ್ಫ್ಯೂ ಘೋಷಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳವು ಕಟ್ಟು ನಿಟ್ಟಿನ ನೈಟ್‌ ಕರ್ಫ್ಯೂ ವಿಧಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಿಗೆ ನಿಷೇಧ ಹೇರಲಾಗಿದೆ. 

ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು 50% ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಆಡಳಿತಾತ್ಮಕ ಸಭೆಗಳನ್ನು ವರ್ಚುಯಲ್‌ ಮೂಲಕ ನಡೆಸಲಾಗುವುದು ಎಂದು ಬಂಗಾಳ ಮುಖ್ಯ ಕಾರ್ಯದರ್ಶಿ ಎಚ್‌ಕೆ ದ್ವಿವೇದಿ ತಿಳಿಸಿದ್ದಾರೆ. ಕೊಲ್ಕತ್ತಾ ಮೆಟ್ರೋ ಹಾಗೂ ಸ್ಥಳೀಯ ಟ್ರೇನುಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ಸಂಜೆ 7 ಗಂಟೆವರೆಗೆ ಸೇವೆ ಸಲ್ಲಿಸಲಿದೆ. ಉಳಿದಂತೆ ಇತರೆ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. 

ಚಿತ್ರ ಮಂದಿರ, ರೆಸ್ಟೋರೆಂಟ್‌, ಬಾರ್‌ಗಳು 50% ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಶಾಪಿಂಗ್‌ ಮಾಲ್‌ಗಳು ಬೆಳಗ್ಗೆ 10 ರಿಂದ 5 ಗಂಟೆವರೆಗೆ ಮಾತ್ರ ತೆರೆಯಲಿದೆ.  ಮದುವೆ ಸೇರಿದಂತೆ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶವಿದ್ದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯಗೊಳಿಸಲಾಗಿದೆ. ಶವಸಂಸ್ಕಾರಕ್ಕೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. 

ನಿನ್ನೆ ಒಂದೇ ದಿನದಲ್ಲಿ 4512 ಹೊಸ ಕೋವಿಡ್‌ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಂದೇ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,300 ಕ್ಕೇರುವಂತೆ ಮಾಡಿದೆ. ಮಹಾರಾಷ್ಟ್ರ, ಕೇರಳ ಬಳಿಕ ಅತೀ ಹೆಚ್ಚು ಕರೋನಾ ಸಕ್ರಿಯ ಪ್ರಕರಣವಿರುವ ರಾಜ್ಯವಾಗಿ ಬಂಗಾಳ ಹೊರಹೊಮ್ಮಿದೆ. ಅದರಲ್ಲಿ 20 ಕ್ಕೂ ಹೆಚ್ಚು ಒಮೈಕ್ರಾನ್‌ ಪ್ರಕರಣಗಳು ದಾಖಲಾಗಿರುವುದು ಕೋವಿಡ್‌ ಮತ್ತೊಂದು ಅಲೆಯ ಎಚ್ಚರಿಕೆಯ ಕರೆಗಂಟೆಯೆಂದು ತಜ್ಞರು ಎಚ್ಚರಿಸಿದ್ದಾರೆ.


SHARE THIS

Author:

0 التعليقات: