Tuesday, 4 January 2022

ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಆರೋಪ: ತೆಲಂಗಾಣ ಬಿಜೆಪಿ ವರಿಷ್ಠನಿಗೆ 14 ದಿನ ನ್ಯಾಯಾಂಗ ಬಂಧನ


 ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಆರೋಪ: ತೆಲಂಗಾಣ ಬಿಜೆಪಿ ವರಿಷ್ಠನಿಗೆ 14 ದಿನ ನ್ಯಾಯಾಂಗ ಬಂಧನ

ಹೈದರಾಬಾದ್: ಪ್ರತಿಭಟನೆಯ ಸಂದರ್ಭ ಕೋವಿಡ್19 ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾದ ಬಿಜೆಪಿಯ ತೆಲಂಗಾಣ ಘಟಕದ ವರಿಷ್ಠ ಬಂಡಿ ಸಂಜಯ್ ಕುಮಾರ್ ಅವರಿಗೆ ಸ್ಥಳೀಯ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

ಈ ತಿಂಗಳ ಆರಂಭದಲ್ಲಿ ರಾಜ್ಯ ಸರಕಾರವು ಜಾರಿಗೊಳಿಸಿರುವ ನೂತನ ವಲಯ ವರ್ಗಾವಣೆ ನೀತಿಯನ್ನು ವಿರೋಧಿಸಿ ಸಂಜಯ್ ಕುಮಾರ್ ಹಾಗೂ ಇತರ ಬಿಜೆಪಿ ನಾಯಕರು ರವಿವಾರರಾತ್ರಿ ಕರೀಂನಗರ ಪಟ್ಟಣದಲ್ಲಿನ ತಮ್ಮ ಕಚೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಈ ನೀತಿಯಿಂದಾಗಿ ರಾಜ್ಯ ಸರಕಾರದ ಉದ್ಯೋಗಿಗಳು ಹಾಗೂ ಶಿಕ್ಷಕರು ಬಾಧಿತರಾಗುತ್ತಾರೆಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಎರಡು ತಾಸುಗಳ ಕಾಲ ಪ್ರತಿಭಟನೆ ನಡೆದ ಬಳಿಕ, ಪೊಲೀಸರು ಬಾಗಿಲ ಬೀಗವನ್ನು ಮುರಿದು , ಕಚೇರಿಯೊಳಗೆ ಆಗಮಿಸಿ ಪ್ರತಿಭಟನನಿರತರನ್ನು ವಶಕ್ಕೆ ತೆಗೆದುಕೊಂಡಿದ್ದರು.

ಕರೀಂನಗರ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ಅವರು ಹೇಳಿಕೆಯೊಂದನ್ನು ನೀಡಿ, ಪ್ರತಿಭಟನೆ ಸಂದರ್ಭ ದೈಹಿಕ ಅಂತರವನ್ನು ಕಾಯ್ದುಕೊಳ್ಳದೆ ಇದ್ದುದಕ್ಕಾಗಿ ಹಾಗೂ ಮಾಸ್ಕ್‌ಗಳನ್ನು ಧರಿಸದೆ ಇದ್ದುದಕ್ಕಾಗಿ ಪ್ರತಿಭಟನೆಲ್ಲಿ ಪಾಲ್ಗೊಂಡಿದ್ದ 21 ಮಂದಿಯ ವಿರುದ್ಧ ವಿಕೋಪ ನಿರ್ವಹಣಾ ಕಾಯ್ದೆಯ ಸೆಕ್ಷನ್ 51(ಬಿ) ಹಾಗೂ ಭಾರತೀಯ ದಂಡಸಂಹಿತೆಯ 188ನೇ ಸೆಕ್ಷನ್ ನಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕನಿಷ್ಠ 70 ಮಂದಿಯನ್ನು ಬಂಧಿಸಲಾಗಿದ್ದು, ತರುವಾಯ ನೋಟಿಸ್ ಗಳನ್ನು ನೀಡಿದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದವರು ತಿಳಿಸಿದ್ದಾರೆ.


SHARE THIS

Author:

0 التعليقات: