Saturday, 8 January 2022

ಉಡುಪಿ ಜಿಲ್ಲೆಯ 186 ಮಂದಿಯಲ್ಲಿ ಕೋವಿಡ್ ಸೋಂಕು ದೃಢ


 ಉಡುಪಿ ಜಿಲ್ಲೆಯ 186 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ: ಜಿಲ್ಲೆಯಲ್ಲಿ ಶನಿವಾರ ಒಟ್ಟು 186 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ದೃಡಪಟ್ಟಿದೆ. ಸೋಂಕಿನಿಂದ ಸಕ್ರಿಯರಾಗಿ ರುವವರ ಸಂಖ್ಯೆಯೂ 708ಕ್ಕೇರಿದೆ. ದಿನದಲ್ಲಿ 36 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಪಾಸಿಟಿವ್ ಬಂದ 186 ಮಂದಿಯಲ್ಲಿ 97 ಮಂದಿ ಪುರುಷರಾದರೆ 89 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 137 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 27 ಮಂದಿ ಹಾಗೂ ಕಾರ್ಕಳ ತಾಲೂಕಿನ 22 ಮಂದಿಯೂ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಈ ಮೂಲಕ ಸೋಂಕು ಜಿಲ್ಲೆಯಾದ್ಯಂತ ವೇಗವಾಗಿ ಹರಡುವ ಸೂಚನೆ ಸಿಕ್ಕಿದೆ. ಪಾಸಿಟಿವ್ ಬಂದವರಲ್ಲಿ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ 177 ಮಂದಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ 36 ಮಂದಿ ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 76,647ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 6717 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 77,834ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.

965 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 965 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ಏಳು ಮಂದಿ 15ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 287 ಮಂದಿ ಮೊದಲ ಡೋಸ್ ಹಾಗೂ 678 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

ಇಂದು ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 200 ಮಂದಿ ಮೊದಲ ಡೋಸ್ ಹಾಗೂ 450 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 80 ಮಂದಿ ಮೊದಲ ಡೋಸ್ ಹಾಗೂ 226 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ತಲಾ ಒಬ್ಬರು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರೂ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.


SHARE THIS

Author:

0 التعليقات: