Wednesday, 5 January 2022

ಪಂಜಾಬ್‌: ಫ್ಲೈಓವರ್‌ನಲ್ಲಿ 15-20 ನಿಮಿಷ ಸಿಲುಕಿದ ಪ್ರಧಾನಿ ಮೋದಿ ವಾಹನ; ಫಿರೋಝ್‌ಪುರ್ ರ‍್ಯಾಲಿ ರದ್ದು


ಪಂಜಾಬ್‌: ಫ್ಲೈಓವರ್‌ನಲ್ಲಿ 15-20 ನಿಮಿಷ ಸಿಲುಕಿದ ಪ್ರಧಾನಿ ಮೋದಿ ವಾಹನ; ಫಿರೋಝ್‌ಪುರ್ ರ‍್ಯಾಲಿ ರದ್ದು

ಹೊಸದಿಲ್ಲಿ: ಪಂಜಾಬ್‌ನ  ಹುಸೈನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲೆಂದು ಇಂದು ಭಟಿಂಡಾಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯ ವಾಹನ ಅಲ್ಲಿಗೆ ತೆರಳುವ ಹಾದಿಯಲ್ಲಿರುವ ಫ್ಲೈಓವರಿನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ನಂತರ ಪ್ರಧಾನಿ ತಮ್ಮ ಕಾರ್ಯಕ್ರಮ ರದ್ದುಗೊಳಿಸಿ ವಾಪಸಾಗಿದ್ದಾರೆಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದ್ದು, ಇದೊಂದು ದೊಡ್ಡ ಭದ್ರತಾ ಲೋಪ ಎಂದೂ ಬಣ್ಣಿಸಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸದೆ ಮರಳಿ ಭಟಿಂಡಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮರಳಿದ್ದು ಪಂಜಾಬ್ ರಾಜ್ಯದ ಆಡಳಿತ ಕಾಂಗ್ರೆಸ್ ಸರಕಾರ ಈ ಭದ್ರತಾ ಲೋಪಕ್ಕೆ ಕಾರಣ ಎಂದು ಸಚಿವಾಲಯ ಆರೋಪಿಸಿದೆ.

"ಭಟಿಂಡಾಗೆ ಇಂದು ಆಗಮಿಸಿದ್ದ ಪ್ರಧಾನಿ, ಅಲ್ಲಿಂದ ಸ್ಮಾರಕಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುವುದೆಂದು ಈ ಹಿಂದೆ ನಿಗದಿಯಾಗಿತ್ತಾದರೂ ಮಳೆ ಹಾಗೂ  ಮಂಜಿನ ವಾತಾವರಣದಿಂದಾಗಿ ಅವರು ಸುಮಾರು 20 ನಿಮಿಷ ಅಲ್ಲಿಯೇ ಬಾಕಿಯಾಗಿದ್ದರು. ಆದರೆ ಪರಿಸ್ಥಿತಿ ಸುಧಾರಿಸದೇ ಇದ್ದಾಗ ರಸ್ತೆ ಮೂಲಕ ಸಾಗಲು ನಿರ್ಧರಿಸಲಾಯಿತು. ರಸ್ತೆ ಮೂಲಕ ಸಾಗಲು ಎರಡು ಗಂಟೆಗೂ ಅಧಿಕ ಸಮಯ ತಗಲುವುದೆಂದು ತಿಳಿದಿದ್ದರೂ ಸೂಕ್ತ ಭದ್ರತಾ ಏರ್ಪಾಟುಗಳ ಬಗ್ಗೆ ಪಂಜಾಬ್ ಡಿಜಿಪಿಯವರಿಂದ ಮಾಹಿತಿ ಪಡೆದು ರಸ್ತೆ ಮೂಲಕ ಸಾಗಲು ನಿರ್ಧರಿಸಿದ್ದರು, ಎಂದು ಗೃಹ ಸಚಿವಾಲಯ ಹೇಳಿದೆ.

ಸ್ಮಾರಕದಿಂದ ಸುಮಾರು 30 ಕಿಮೀ ದೂರದಲ್ಲಿ ಫ್ಲೈಓವರ್‌ನಲ್ಲಿ ಪ್ರಧಾನಿಯ ವಾಹನ ಮತ್ತು ಬೆಂಗಾವಲು ಪಡೆ ಸಾಗುತ್ತಿದ್ದಾಗ ಪ್ರತಿಭಟನಾಕಾರರು ರಸ್ತೆಗೆ ಅಡ್ಡಿಯುಂಟು ಮಾಡಿದ್ದರು. ಇದರಿಂದ ಪ್ರಧಾನಿ ವಾಹನ 15-20 ನಿಮಿಷ ಅಲ್ಲಿಯೇ ಬಾಕಿಯಾಯಿತು. ಪಂಜಾಬ್ ಸರಕಾರಕ್ಕೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ವಾಯು ಮಾರ್ಗದಲ್ಲಿ ಸಾಗಲು ಸಾಧ್ಯವಿಲ್ಲದೇ ಇದ್ದಲ್ಲಿ ರಸ್ತೆ ಮೂಲಕ ಸಾಗಲು ಏರ್ಪಾಟು ಮಾಡಬೇಕಿದ್ದರೂ ಸೂಕ್ತ ಏರ್ಪಾಟು ಮಾಡಿರದೇ ಇದ್ದುದರಿಂದ ಅವರು ಮರಳಿ ಭಟಿಂಡಾ ವಿಮಾನ ನಿಲ್ದಾಣಕ್ಕೆ ತೆರಳಿದರು,'' ಎಂದು ಗೃಹ ಸಚಿವಾಲಯ ಹೇಳಿದೆ.

ಈ ಘಟನೆ ಕುರಿತು ಪಂಜಾಬ್ ಸರಕಾರದಿಂದ ವಿಸ್ತೃತ ವರದಿಯನ್ನು ಗೃಹ ಸಚಿವಾಲಯ ಕೇಳಿದೆಯಲ್ಲದೆ ಅದಕ್ಕೆ ಯಾರು ಜವಾಬ್ದಾರರೆಂದು ಪತ್ತೆ ಹಚ್ಚಿ ಕ್ರ‍್ರಮಕೈಗೊಳ್ಳಬೇಕೆಂದೂ ಸೂಚಿಸಿದೆ.

ಫಿರೋಝ್‌ಪುರ್ ರ‍್ಯಾಲಿ ರದ್ದು

ಪ್ರಧಾನಿ ನರೇಂದ್ರ ಮೋದಿ ಇಂದು ಫಿರೋಝ್‌ಪುರ್‌ನಲ್ಲಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಭಾಗವಹಿಸದೇ ಇದ್ದ ಕಾರಣ, ಹೆಚ್ಚಿನ ಭಾಷಣಕಾರರು ಆಗಮಿಸಿದ್ದರೂ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ವೇದಿಕೆಗೆ ಬಂದು ಪ್ರಧಾನಿಯ ಕಾರ್ಯಕ್ರಮ ರದ್ದಾಗಿದೆ ಎಂದು ಘೋಷಿಸಿದರೂ ಕಾರಣವನ್ನು ನೀಡಿಲ್ಲ.

ವರದಿಗಳ ಪ್ರಕಾರ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸದಸ್ಯರು  ಕಳೆದ 12 ಗಂಟೆಗಳಿಗೂ ಹೆಚ್ಚಿನ ಸಮಯದಿಂದ ಪ್ರಧಾನಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರಲ್ಲದೆ ಫಿರೋಝ್‌ಪುರ್ ರ‍್ಯಾಲಿಗೆ ತೆರಳುವ ಎಲ್ಲಾ ರಸ್ತೆಗಳು ಇದರಿಂದ ಬಂದ್ ಆಗಿದ್ದವು.

ಪ್ರಧಾನಿ ಇಂದು ಪಂಜಾಬ್‌ನಲ್ಲಿ ರೂ. 42,750 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದರು. ದಿಲ್ಲಿ-ಅಮೃತಸರ್ ಕತ್ರಾ ಎಕ್ಸಪ್ರೆಸ್‌ವೇ, ಅಮೃತಸರ್-ಉನಾ ಚತುಷ್ಪಥ ಯೋಜನೆಗೆ ಶಿಲಾನ್ಯಾಸ, ಕಪುರ್ತಲಾ ಮತ್ತು ಹೋಶಿಯಾರಪುರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಿಲಾನ್ಯಾಸ  ಕೂಡ ಇಂದು ನೆರವೇರಿಸಲಿದ್ದರು.

ವಿವಾದಾತ್ಮಕ ಕೃಷಿ ಕಾನೂನು ವಾಪಸಾತಿ ನಂತರ ಇದೇ ಮೊದಲ ಬಾರಿ ಪ್ರಧಾನಿ ಪಂಜಾಬ್ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿತ್ತು.


SHARE THIS

Author:

0 التعليقات: