Tuesday, 11 January 2022

ಬಾರ್ಕ್‍ಲೇಸ್ ಕಂಪೆನಿಗೆ 131 ಮಿಲಿಯನ್ ಡಾಲರ್ ಪಾವತಿಸುವಂತೆ ಬಿ.ಆರ್. ಶೆಟ್ಟಿಗೆ ಲಂಡನ್ ನ್ಯಾಯಾಲಯ ಆದೇಶ

 

ಬಾರ್ಕ್‍ಲೇಸ್ ಕಂಪೆನಿಗೆ 131 ಮಿಲಿಯನ್ ಡಾಲರ್ ಪಾವತಿಸುವಂತೆ ಬಿ.ಆರ್. ಶೆಟ್ಟಿಗೆ ಲಂಡನ್ ನ್ಯಾಯಾಲಯ ಆದೇಶ

ಲಂಡನ್: ಬಾರ್ಕ್‍ಲೇಸ್ ಪಿಎಲ್‍ಸಿ ಸಂಸ್ಥೆಯು ಉಡುಪಿ ಮೂಲದ ಎನ್ನಾರೈ ಉದ್ಯಮಿ ಬಿ ಆರ್ ಶೆಟ್ಟಿ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಗಳಿಸಿದ್ದು, ಶೆಟ್ಟಿ ಅವರು ಕಂಪೆನಿಗೆ 131 ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ಆದೇಶಿಸಿದೆ ಎಂದು ವರದಿಯಾಗಿದೆ.

ಎನ್‍ಎಂಸಿ ಹೆಲ್ತ್ ಕೇರ್ ಸಂಸ್ಥೆಯ ಸ್ಥಾಪಕರಾಗಿದ್ದ ಆದರೆ ಆರ್ಥಿಕ ಅವ್ಯವಹಾರಗಳ ಆರೋಪಗಳಿಂದ ತಮ್ಮದೇ ಸಂಸ್ಥೆಯಿಂದ ಹೊರನಡೆಯಬೇಕಾಗಿ ಬಂದಿದ್ದ ಬಿ ಆರ್ ಶೆಟ್ಟಿ ಅವರ ಬ್ಯಾಂಕ್ ಖಾತೆಗಳನ್ನು ಈಗಾಗಲೇ ಮುಟ್ಟುಗೋಲು ಹಾಕಲಾಗಿದೆ.

ಶೆಟ್ಟಿ ಅವರು "ಆರ್ಥಿಕವಾಗಿ ದುರ್ಬಲರಾಗಿದ್ದಾರೆ'' ಎಂದು ಕಳೆದ ತಿಂಗಳು ಕೋರ್ಟ್ ವಿಚಾರಣೆಯಲ್ಲಿ ಅವರ ವಕೀಲರು ವಾದಿಸಿದ್ದರಲ್ಲದೆ ಈ ಪ್ರಕರಣವನ್ನು ಮುಂದೂಡುವಂತೆಯೂ ಕೋರಿದ್ದರು. ಆದರೆ ಈ ವಾದವನ್ನು ಸೋಮವಾರ ಲಂಡನ್ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಈ ತೀರ್ಪಿನ ಹಿನ್ನೆಲೆಯಲ್ಲಿ  ಶೆಟ್ಟಿ ಅವರಿಗೆ ಸಂಬಂಧಿಸಿದ ಜಗತ್ತಿನಾದ್ಯಂತದ ಖಾತೆಗಳ ಮುಟ್ಟುಗೋಲಿಗೆ ಆದೇಶ ಕೂಡ ದೊರಕಿದೆ. ಇದರಲ್ಲಿ ಲಂಡನ್‍ನಲ್ಲಿರುವ ಶೆಟ್ಟಿ ಅವರ ಒಂದು ಸೊತ್ತು ಕೂಡ ಸೇರಿದೆ.

ಈ ತೀರ್ಪಿನ ವಿರುದ್ಧ ಶೆಟ್ಟಿ ಅಪೀಲು ಸಲ್ಲಿಸಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಆದರೆ ಬಾರ್ಕ್‍ಲೇಸ್ ಈ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

ಕಳೆದ ವರ್ಷ  ಶೆಟ್ಟಿ ಅವರು ತಮ್ಮ ಎನ್‍ಎಂಸಿ ಹೆಲ್ತ್ ಸಂಸ್ಥೆಯ ಲೆಕ್ಕಪತ್ರ ಪರಿಶೋಧನೆ ನಡೆಸಿದ್ದ ಅನ್ಸ್ರ್ಟ್ & ಯಂಗ್ ಸಂಸ್ಥೆಯ ವಿರುದ್ಧವೂ ನ್ಯೂಯಾರ್ಕ್ ನಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಬಾರ್ಕ್‍ಲೇಸ್ ಸಂಸ್ಥೆಯು ಶೆಟ್ಟಿ ವಿರುದ್ಧ ಹೂಡಿದ್ದ ಕಾನೂನು ಸಮರ ಎನ್‍ಎಂಸಿ ಹೆಲ್ತ್ ಗೆ ಸಂಬಂಧಿಸಿದ್ದಲ್ಲ ಎಂದು ವರದಿಯಾಗಿದೆ.


SHARE THIS

Author:

0 التعليقات: