Saturday, 18 December 2021

ಕನ್ನಡ ವಿವಿಯ ವಿವಾದಿತ ಸಮಸ್ಯೆಗಳನ್ನು ಪರಿಹರಿಸಿ, ಆರ್ಥಿಕ ಸಂಕಷ್ಟ ನೀಗಿಸಲು ಮುಖ್ಯಮಂತ್ರಿಗೆ ಬರಗೂರು ಆಗ್ರಹ


 ಕನ್ನಡ ವಿವಿಯ ವಿವಾದಿತ ಸಮಸ್ಯೆಗಳನ್ನು ಪರಿಹರಿಸಿ, ಆರ್ಥಿಕ ಸಂಕಷ್ಟ ನೀಗಿಸಲು ಮುಖ್ಯಮಂತ್ರಿಗೆ ಬರಗೂರು ಆಗ್ರಹ

ಬೆಂಗಳೂರು: ಕನ್ನಡ ವಿಶ್ವವಿದ್ಯಾನಿಲಯದ ವಿವಾದಿತ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಪ್ರೊ.ಬರಗೂರು, ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾನಿಲಯವು ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕವು ತಲೆತಗ್ಗಿಸುವಂತೆ ಮಾಡುತ್ತಿದೆ. ವೈಯಕ್ತಿಕ ಮತ್ತು ಸಾಂಸ್ಥಿಕ ವಿವಾದಗಳು ಒಂದು ಕಡೆಗಾದರೆ, ಬಹುಮುಖ್ಯವಾಗಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುದಾನದ ಕೊರತೆಯುಂಟಾಗಿ ಬೋಧಕರು, ಬೋಧಕೇತರರು, ಸಂಶೋಧನಾ ವಿದ್ಯಾರ್ಥಿಗಳು ಸಂಕಷ್ಟ  ಎದುರಿಸುತ್ತಿದ್ದಾರೆ ಎಂದವರು ಉಲ್ಲೇಖಿಸಿದ್ದಾರೆ.

ಬೇರೆ ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಿಂದ ಸಾಕಷ್ಟು ಆರ್ಥಿಕ ಬಲ ಬರುತ್ತದೆ. ಕನ್ನಡ ವಿಶ್ವವಿದ್ಯಾನಿಲಯವು ಪ್ರಧಾನವಾಗಿ ಸಂಶೋಧನಾ ವಿಶ್ವವಿದ್ಯಾನಿಲಯವಾದ್ದರಿಂದ ಸರಕಾರ ನೀಡುವ ಅನುದಾನವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನುದಾನವು ಪೂರ್ಣ ಪ್ರಮಾಣದಲ್ಲಿ ವಿಶ್ವವಿದ್ಯಾನಿಲಯಕ್ಕೆ ಲಭ್ಯವಾಗಿಲ್ಲವೆಂದು ಹೇಳಲಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳಿಗೆ 36 ತಿಂಗಳಿಂದ ಶಿಷ್ಯವೇತನ ನೀಡಿಲ್ಲವೆಂದು ತಿಳಿದುಬಂದಿದೆ. ಜೊತೆಗೆ ಬೋಧಕ ಮತ್ತು ಬೋಧಕೇತರರಿಗೂ ಕೆಲವು ತಿಂಗಳ ಸಂಬಳ ನೀಡಿಲ್ಲವೆಂದು ಹೇಳಲಾಗಿದೆ. ಕನ್ನಡದ ಮೂಲಕ ಸ್ಥಳೀಯ ಹಾಗೂ ಜಾಗತಿಕ ಜ್ಞಾನವನ್ನು ನೀಡುವ ಮಹದೊದ್ದೇಶದಿಂದ ಆರಂಭವಾದ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಇಂಥ ಆರ್ಥಿಕ ದುಃಸ್ಥಿತಿ ಬರಬಾರದು. ಆದ್ದರಿಂದ ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯವಾದ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಸರಕಾರದ ಕನ್ನಡಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಮತ್ತು ಪ್ರಶ್ನಾರ್ಹವಾಗುತ್ತದೆ ಎಂದವರು ಹೇಳಿದ್ದಾರೆ.

ಪೂರ್ಣ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ, ನಿತ್ಯ ವಿವಾದದಿಂದ ಕೆಟ್ಟ ಹೆಸರಿಗೆ ಕಾರಣವಾಗುತ್ತಿರುವ ಕನ್ನಡ ವಿಶ್ವವಿದ್ಯಾನಿಲಯದ ಘನತೆಯನ್ನು ಕಾಪಾಡುವುದಕ್ಕಾಗಿ ಸೂಕ್ತ ಸಮಿತಿಯನ್ನು ನೇಮಿಸಿ ವಿವಾದಿತ ವಿದ್ಯಮಾನಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


SHARE THIS

Author:

0 التعليقات: