ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಅವಮಾನ: ಕಿಡಿಗೇಡಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಸಚಿವ ಕೆ.ಎಸ್.ಈಶ್ವರಪ್ಪ
ಬೆಳಗಾವಿ: ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಅವಮಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳು, ಪುಂಡರನ್ನು ಗಡೀಪಾರು ಮಾಡುವುದಲ್ಲದೆ, ಅಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಎಂ.ಇ.ಎಸ್ ಅನ್ನೋದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಅದು ಮಹಾರಾಷ್ಟ್ರ ಹೇಡಿಗಳ ಸಮಿತಿ. ರಾತ್ರಿ ವೇಳೆ ಹೋಗಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವವರು ಜೀವಂತ ಗಂಡುಗಳಾಗಿದ್ದರೆ ಹಗಲು ವೇಳೆ ಈ ಕೃತ್ಯ ಎಸಗಲಿ ನೋಡೋಣ ಎಂದರು.
ಒಂದು ವೇಳೆ ಅವರು ಕನ್ನಡಿಗರ ಕೈಗೆ ಸಿಕ್ಕಿದ್ದರೆ ಚಿಂದಿಯಾಗುತ್ತಿದ್ದರು. ಈ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಯಾಕೆ ಮೌನವಾಗಿದ್ದರೆ ಅನ್ನೋದು ಗೊತ್ತಿಲ್ಲ. ಈ ಘಟನೆ ಕುರಿತು ಸಮಗ್ರ ತನಿಖೆಯಾಗಬೇಕು. ಈ ದೇಶದ್ರೋಹಿಗಳ ಹಿಂದೆ ಯಾರಿದ್ದಾರೋ ಅದೂ ಗೊತ್ತಾಗಬೇಕು ಎಂದು ಅವರು ತಿಳಿಸಿದರು.
ಆದುದರಿಂದ, ಈ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ನಮ್ಮ ಧ್ವಜವನ್ನು ಮುಂದೆ ಯಾರೂ ಮುಟ್ಟಬಾರದು ಆ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
0 التعليقات: