ಬೆಂಗಳೂರು: ತೆರವುಗೊಳಿಸಿದ್ದ ಮಸೀದಿಯ ಧ್ವನಿವರ್ಧಕಗಳನ್ನು ಹಿಂದಿರುಗಿಸಿದ ಪೊಲೀಸರು
ಬೆಂಗಳೂರು: ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ಬೆಂಗಳೂರಿನ ಹಲವು ಮಸೀದಿಗಳ ಧ್ವನಿವರ್ಧಕಗಳನ್ನು ತೆರವುಗೊಳಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ತೆರವುಗೊಳಿಸಿದ್ದ ಧ್ವನಿವರ್ಧಕಗಳನ್ನು ಹಿಂದಿರುಗಿಸಿದ್ದಾರೆ.
ಮಸೀದಿಗಳಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಧ್ವನಿವರ್ಧಕ ಹಾಕಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಇತ್ತೀಚೆಗೆ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ರಿಟ್ ಅರ್ಜಿ ವಿಚಾರಣೆ ಇನ್ನೂ ಬಾಕಿಯಿರುವಾಗಲೇ ಡಿ.22ರ ಬುಧವಾರ ಸಿದ್ದಾಪುರ ಪೊಲೀಸರು, ಹೈಕೋರ್ಟ್ ಆದೇಶವಿದೆ ಎಂದು ಹೇಳಿ ತಮ್ಮ ವ್ಯಾಪ್ತಿಗೆ ಬರುವ ಮಸೀದಿಗಳ ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದರು.
ಈ ಕ್ರಮವನ್ನು ಖಂಡಿಸಿ ಸಿದ್ದಾಪುರ ಆಲ್ ಮಸ್ಜಿದ್ ಕಮಿಟಿ ಮತ್ತು ಜಯನಗರ ಮಸ್ಜಿದ್ ಫೆಡರೇಶನ್ ಸೇರಿ ಹಲವು ಸಂಘಟನೆಗಳು ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ತನಿಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದ ಧ್ವನಿವರ್ಧಕಗಳನ್ನು ಪೊಲೀಸರು ಡಿ.23ರಂದು ಹಿಂದಿರುಗಿಸಿದರು. ಧ್ವನಿವರ್ಧಕ ತೆರವಿನಿಂದ ಮಸೀದಿಗಳಲ್ಲಿ ಆಝಾನ್ ಕರೆ ಕೊಡಲು ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಮಾಜಿ ಕಾರ್ಪೊರೇಟರ್ ಮುಜಾಹಿದ್ ಪಾಷಾ ಅವರು ಐದು ಮಸೀದಿಗಳಿಗೆ ಧ್ವನಿವರ್ಧಕಗಳನ್ನು ಒದಗಿಸಿದ್ದಾರೆ.
0 التعليقات: