Saturday, 11 December 2021

ನಿಖಾಹ್ ಸಮಾರಂಭದ ವೀಡಿಯೊ ಬಳಸಿ 'ಸಾಹಿತ್ಯ ಸಮ್ಮೇಳನದಲ್ಲಿ ಕುರ್‌ ಆನ್ ಪಠಣʼ ಎಂಬ ಸುಳ್ಳುಸುದ್ದಿ ಹರಡಿದ ಬಿಜೆಪಿ ನಾಯಕರು


 ನಿಖಾಹ್ ಸಮಾರಂಭದ ವೀಡಿಯೊ ಬಳಸಿ 'ಸಾಹಿತ್ಯ ಸಮ್ಮೇಳನದಲ್ಲಿ ಕುರ್‌ ಆನ್ ಪಠಣʼ ಎಂಬ ಸುಳ್ಳುಸುದ್ದಿ ಹರಡಿದ ಬಿಜೆಪಿ ನಾಯಕರು

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ನಡೆದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಕುರಾನ್ ಪಠಣ ನಡೆದಿದೆ, ಈಗ ಸಾಹಿತ್ಯ ಸಮ್ಮೇಳನಗಳು ಕುರ್‌ ಆನ್ ಪಠನದೊಂದಿಗೆ  ಆರಂಭಗೊಳ್ಳುತ್ತದೆ, ಹಿಂದೆಲ್ಲಾ ಸರಸ್ವತಿ ವಂದನೆಯೊಂದಿಗೆ ನಡೆಯುತ್ತಿತ್ತು ಎಂದು ಹೇಳಿಕೊಂಡು ಬಿಜೆಪಿ ನಾಯಕ ಹರಿಓಂ ಪಾಂಡೆ ಅವರು ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಮತ್ತು  ಮಹಾರಾಷ್ಟ್ರ ಸಚಿವ ಜಿತೇಂದ್ರ ಅವಹದ್ ಕೂಡ ಕಾಣಿಸುತ್ತಿದ್ದಾರೆ.‌ ಈ ಕುರಿತಾದ ಸತ್ಯಾವಸ್ಥೆಯನ್ನು altnews.in ಬಯಲಿಗೆಳೆದಿದೆ.

ಪಶ್ಚಿಮ ಬಂಗಾಳದ ಶಂಕರಾಚಾರ್ಯ ಗುರುಕುಲ್ ಅಧ್ಯಕ್ಷೆ ಅರ್ಪಿತಾ ಮುಖರ್ಜಿ ಕೂಡ ಇದೇ ಚಿತ್ರವನ್ನು ಶೇರ್  ಮಾಡಿದ್ದು ಇದನ್ನು 4500ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.  ಇನ್ನೂ ಹಲವರು ಈ ಚಿತ್ರ ಶೇರ್ ಮಾಡಿದ್ದಾರೆ ಹಾಗೂ ಈ ಪೋಸ್ಟ್ ವೈರಲ್ ಆಗಿದೆ.

ಈ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಆಪ್‍ಕಾ ಪ್ರಹಾರ್ ಟೈಮ್ಸ್ ಎಂಬ ಯುಟ್ಯೂಬ್ ಚಾನೆಲ್‍ನಲ್ಲಿ ಈ ವೀಡಿಯೋ ಕಂಡುಬಂದಿದೆ. ಈ ವೀಡಿಯೋದ 3:20 ಅವಧಿಯಲ್ಲಿ ಮಾಡಿದ ಉಲ್ಲೇಖದಲ್ಲಿ ಸುಪ್ರಿಯಾ ಅವರು ಸಹ ಎನ್‍ಸಿಪಿ ನಾಯಕ ಶಮೀಮ್ ಖಾನ್ ಅವರ ಪುತ್ರನ ನಿಖಾಹ್ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ ಹಾಗೂ ಕಾರ್ಯಕ್ರಮದಲ್ಲಿ ನಡೆಸಲಾಗಿದ್ದ ಫೇಸ್ಬುಕ್ ಲೈವ್ ಸ್ಟ್ರೀಮಿಂಗ್ ಅನ್ನು ಸುಪ್ರಿಯಾ ಅವರು ಶೇರ್ ಮಾಡಿದ್ದಾರೆಂದೂ  ಹೇಳಲಾಗಿತ್ತು.

ಸುಪ್ರಿಯಾ ಅವರು ಈ ಫೇಸ್ಬುಕ್ ಲೈವ್ ವೀಡಿಯೋವನ್ನು ಡಿಸೆಂಬರ್ 4ರಂದು ಪೋಸ್ಟ್ ಮಾಡಿದ್ದರು.

ಒಟ್ಟಾರೆಯಾಗಿ ನಿಖಾಹ್ ಸಮಾರಂಭದ ಚಿತ್ರವನ್ನು ಸಾಹಿತ್ಯ ಸಮ್ಮೇಳನದಲ್ಲಿ ಕುರಾನ್ ಪಠನ ಎಂದು ಹೇಳಿಕೊಂಡು ಕೆಲ ಬಿಜೆಪಿ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.


SHARE THIS

Author:

0 التعليقات: