ಖಾಸಗೀಕರಣ ವಿರೋಧಿಸಿ ಸಾರ್ವಜನಿಕ ರಂಗದ ಬ್ಯಾಂಕ್ ಉದ್ಯೋಗಿಗಳ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಆರಂಭ
ಹೊಸದಿಲ್ಲಿ: ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಸಾರ್ವಜನಿಕ ರಂಗದ ಬ್ಯಾಂಕ್ ಉದ್ಯೋಗಿಗಳು ತಮ್ಮ ದೇಶವ್ಯಾಪಿ ಎರಡು ದಿನಗಳ ಮುಷ್ಕರವನ್ನು ಗುರುವಾರ ಆರಂಭಿಸಿದ್ದಾರೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಶನ್, ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ ಮತ್ತು ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ ಸೇರಿದಂತೆ ಒಂಬತ್ತು ಬ್ಯಾಂಕ್ ಉದ್ಯೋಗಿಗಳ ಸಂಘಗಳನ್ನೊಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಈ ಮುಷ್ಕರಕ್ಕೆ ಕರೆ ನೀಡಿದೆ.
ದೇಶಾದ್ಯಂತ ಸುಮಾರು 7 ಲಕ್ಷ ಬ್ಯಾಂಕ್ ಉದ್ಯೋಗಿಗಳು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತ ಹೇಳಿದ್ದಾರೆ.
ದೇಶದ ಎರಡು ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಸರಕಾರ ಈಗಾಗಲೇ ಐಡಿಬಿಐ ಬ್ಯಾಂಕ್ನ ತನ್ನ ಹೆಚ್ಚಿನ ಪಾಲನ್ನು ಎಲ್ಐಸಿಗೆ ಮಾರಾಟ ಮಾಡಿದ್ದು ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ರಂಗದ ಬ್ಯಾಂಕ್ಗಳನ್ನು ವಿಲೀನಗೊಳಿಸಿದೆ.
ಖಾಸಗಿ ವಲಯದ ಬ್ಯಾಂಕ್ಗಳು ಇಂದು ಎಂದಿನಂತೆ ಕಾರ್ಯಾಚರಿಸುತ್ತಿವೆ.
0 التعليقات: