ಬೆಂಗಳೂರು: ದರೋಡೆ ಪ್ರಕರಣ;
ಆರೋಪಿಯ ಕಾಲಿಗೆ ಗುಂಡು ಹಾರಿಸಿ
ಬಂಧಿಸಿದ ಪೊಲೀಸರು
ಬೆಂಗಳೂರು: ದರೋಡೆ ಪ್ರಕರಣದಲ್ಲಿ ಬಂಧಿಸಲು ಹೋದ ಯಶವಂತಪುರದ ಸಬ್ಇನ್ಸ್ಪೆಕ್ಟರ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ರೌಡಿಶೀಟರ್ ಶುಕ್ರವಾರ ಸಂಜಯನಗರ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ದಿವಾಕರ ಅರಸ್(24) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಗಿರಿನಗರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಈತನ ಮೇಲೆ ಗಿರಿನಗರ, ಹನುಮಂತನಗರ ಸೇರಿ ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅತ್ತ-ಸೊಸೆ ಮನೆಯಲ್ಲಿದ್ದಾಗ ದರೋಡೆಕೋರರು ನುಗ್ಗಿ ಪಿಸ್ತೂಲು ತೋರಿಸಿ ಬೆದರಿಸಿ ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ಕೆಲವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ದಿವಾಕರ್ ಅರಸ್ಗಾಗಿ ಶೋಧ ನಡೆಸುತ್ತಿದ್ದರು. ಎರಡು ದಿನದ ಹಿಂದೇ ಹೆಬ್ಬಾಳ ಮೇಲ್ಸೇತುವೆ ಬಳಿಯ ತೋಟದ ಬಳಿ ಆರೋಪಿ ದಿವಾಕರ್ ಇರುವ ಬಗ್ಗೆ ಸಬ್ಇನ್ಸ್ಪೆಕ್ಟರ್ ವಿನೋದ್ ರಾಥೋಡ್ ಅವರಿಗೆ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ರಾಥೋಡ್ ಅವರ ಭುಜಕ್ಕೆ ದಿವಾಕರ್ ಚುಚ್ಚಿ ಪರಾರಿಯಾಗಿದ್ದನು. ಗಾಯಗೊಂಡ ರಾಥೋಡ್ ಅವರು ಸಂಜಯನಗರ ಪೊಲೀಸರಿಗೆ ಘಟನೆಯನ್ನು ವಿವರಿಸಿ ದೂರು ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು.
ಶುಕ್ರವಾರ ಬೆಳಗ್ಗೆ ಸಂಜಯನಗರ ಪೊಲೀಸರು ಆರೋಪಿ ದಿವಾಕರ್, ಎಚ್ಎಂಟಿ ಕಾರ್ಖಾನೆ ಬಳಿ ಇರುವ ಮಾಹಿತಿಯನ್ನು ಕಲೆ ಹಾಕಿ ಬಂಧಿಸಿದ್ದಾರೆ. ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
0 التعليقات: