Monday, 6 December 2021

ಶಾಲೆಯಲ್ಲಿ ಬಜರಂಗದಳ ಕಾರ್ಯಕರ್ತರಿಂದ ದಾಳಿ : ದೂರು


ಶಾಲೆಯಲ್ಲಿ ಬಜರಂಗದಳ ಕಾರ್ಯಕರ್ತರಿಂದ ದಾಳಿ : ದೂರು

ಮಧ್ಯಪ್ರದೇಶ: ಬಜರಂಗದಳ ಕಾರ್ಯಕರ್ತರು ಶಾಲೆಯೊಂದರ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ ಪ್ರಕರಣ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಿಂದ ವರದಿಯಾಗಿದೆ.

ಎಂಟು ವಿದ್ಯಾರ್ಥಿಗಳನ್ನು ಮತಾಂತರಗೊಳಿಸಿದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರು ಮಿಷಿನರಿ ಶಾಲೆಯೊಂದರ ಮೇಲೆ ದಾಳಿ ಮಾಡಿದರು ಎಂದು ಆಪಾದಿಸಲಾಗಿದೆ. ಬಜರಂಗದಳ ಕಾರ್ಯಕರ್ತರ ಆರೋಪವನ್ನು ಶಾಲೆ ನಿರಾಕರಿಸಿದೆ.

ಜಿಲ್ಲೆಯ ಗಂಜ್‌ಬಸೋದಾ ಎಂಬಲ್ಲಿ ಸಂತ ಜೋಸೆಫ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಡಿಪಿಒ ಭರತ್ ಭೂಷಣ್ ಶರ್ಮಾ ಹೇಳಿದ್ದಾರೆ. ಆದರೆ ದಾಳಿಯಲ್ಲಿ ವಿದ್ಯಾರ್ಥಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಶಾಲೆಯ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ. ದಾಂಧಲೆ ವೇಳೆ ಶಾಲೆಗೆ ದಾಳಿಕೋರರು ಕಲ್ಲು ಎಸೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಆದರೆ ತಮ್ಮ ಸಂಘಟನೆ ವತಿಯಿಂದ ಶಾಲೆಯ ಎದುರು ಶಾಂತಿಯುತ ಧರಣಿ ಮಾತ್ರ ನಡೆಸಲಾಗಿದ್ದು, ಬಳಿಕ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಬಜರಂಗದಳ ಪದಾಧಿಕಾರಿ ನೀಲೇಶ್ ಅಗರ್‌ ವಾಲ್ ಹೇಳಿದ್ದಾರೆ.

ಸಂಸ್ಥೆಯಲ್ಲಿ ಸಂಭವಿಸಿದ ಗಲಾಟೆಗೂ ತಮಗೂ ಸಂಬಂಧ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹಲವು ಸಂಘಟನೆಗಳು ಕಳೆದ ಒಂದು ವಾರದಿಂದ ಮತಾಂತರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇತರ ರಾಜ್ಯಗಳಿಂದ ಕರೆತಂದ ಬಡ ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಅಗರ್‌ ವಾಲ್ ಆಪಾದಿಸಿದ್ದಾರೆ.

ಆದರೆ ಈ ಎಲ್ಲ ಆರೋಪಗಳನ್ನು ಸಂತ ಜೋಸೆಫ್ ಚರ್ಚ್ ನಿರಾಕರಿಸಿದೆ. ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ, "ಧಾರ್ಮಿಕ ಮತಾಂತರ ನಡೆಸಿಲ್ಲ. ಎಂಟು ಮಂದಿ ಕ್ರೈಸ್ತ ಮಕ್ಕಳಿಗೆ ಜನ್ಯೂ ಸಂಸ್ಕಾರ (ಬಿಳಿ ಬಟ್ಟೆ ಉಡುವ ಮತ್ತು ಪವಿತ್ರ ದಾರ ತೊಡಿಸುವ ಸಮಾರಂಭ) ನೆರವೇರಿಸಲಾಗಿದೆ" ಎಂದು ಸ್ಪಷ್ಟಪಡಿಸಿದೆ. ಸತ್ಯಾಂಶವನ್ನು ಪತ್ತೆ ಮಾಡುವ ಸಲುವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಚರ್ಚ್ ಒತ್ತಾಯಿಸಿದೆ.


SHARE THIS

Author:

0 التعليقات: