Friday, 3 December 2021

ಗ್ರಾಮಸ್ವರಾಜ್ಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರಿಂದ ಜನಸ್ವರಾಜ್ಯ ಯಾತ್ರೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕೆ


ಗ್ರಾಮಸ್ವರಾಜ್ಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರಿಂದ ಜನಸ್ವರಾಜ್ಯ ಯಾತ್ರೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕೆ

ಚಿಕ್ಕಮಗಳೂರು: ಗ್ರಾಮ ಸ್ವರಾಜ್ಯ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿಯವರಿಗೆ ಜನಸ್ವರಾಜ್ಯ ಕಾರ್ಯಕ್ರಮದ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಯಾವುದೇ ಜನಪರ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಕಮಿಷನ್ ಮೂಲಕ ಖಜಾನೆ ಲೂಟಿ ಮಾಡುವ ಭ್ರಷ್ಟಾಚಾರಿಗಳ ಸರಕಾರ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆಯ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಸೆರಾಯ್ ಹೊಟೇಲ್‍ನ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಈ ಕಾರಣಕ್ಕೆ ಅವರು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸಕಾಲಕ್ಕೆ ಚುನಾವಣೆ ನಡೆಸುವ ಮೂಲಕ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಬಲ ತುಂಬಬೇಕು. ಆದರೆ ಬಿಜೆಪಿ ಸರಕಾರ ಸಕಾಲದಲ್ಲಿ ತಾಪಂ, ಜಿಪಂ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ಕಾನೂನೊಂದನ್ನು ಜಾರಿ ಮಾಡಿ ಮುಂದೂಡುತ್ತಾ ಬಂದಿದೆ. ಗ್ರಾಮ ಸ್ವರಾಜ್ಯ, ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿ ನಂಬಿಕೆ ಇದ್ದಿದ್ದರೇ ಸಕಾಲದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಅವರುಗಳಿಗೆ ಅನುದಾನ ಬಿಡುಗಡೆ ಮಾಡಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲು ಯಾವುದೇ ಜನಪರ ಕೆಲಸಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.

ನರೇಗಾ ಯೋಜನೆ ಯುಪಿಎ ಸರಕಾರದ ಕೊಡುಗೆಯಾಗಿದೆ. ಈ ಯೋಜನೆ ಮೂಲಕ ಸದ್ಯ ಗ್ರಾಮ ಪಂಚಾಯತ್‍ಗಳ ಪ್ರತಿನಿಧಿಗಳು ತಮಗೆ ಮತ ನೀಡಿದ ಜನರಿಗೆ ಮುಖ ತೋರಿಸುವಂತಾಗಿದೆ. ಸದ್ಯ ರಾಜ್ಯ ಹಾಗೂ ಕೇಂದ್ರ ಸರಕಾರಗಳು ನರೇಗಾ ಯೋಜನೆಗೂ ಅನುದಾನ ನೀಡದೇ ಗ್ರಾಪಂ ಪ್ರತಿನಿಧಿಗಳನ್ನು ತಲೆ ತಗ್ಗಿಸಿ ನಡೆಯುವಂತೆ ಮಾಡಿವೆ ಎಂದ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಅಧಿಕಾರ ವಿಕೇಂದ್ರೀಕಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತರುವ ಮೂಲಕ ಹಿಂದುಳಿದ ವರ್ಗಗಳು, ಅಲ್ಪಂಸಂಖ್ಯಾತರು, ಮಹಿಳೆಯರು, ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ಸಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು. ಆದರೆ ಈ ತಿದ್ದುಪಡಿಯನ್ನು ಅಂದಿನ ಬಿಜೆಪಿ ಮುಖಂಡ ರಾಮಾಜೋಯಿಷ್ ಸಂವಿಧಾನ ಬಾಹಿರ ಎಂದು ಕರೆದು ಇದರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದಿದ್ದರೇ ರಾಮಾಜೋಯಿಸ್ ಅವರ ನಡೆಯನ್ನು ಅಂದು ಬಿಜೆಪಿಯವರು ಏಕೆ ವಿರೋಧಿಸಲಿಲ್ಲ?, ಸಾಮಾಜಿಕ ನ್ಯಾಯದ ಬಗ್ಗೆ ಒಂದು ದಿನವೂ ಮಾತನಾಡದ, ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬದ ಬಿಜೆಪಿಯವರಿಗೆ ಅಧಿಕಾರದಲ್ಲಿರಲು ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ತಾನು ಸಿಎಂ ಆಗಿದ್ದ ಅವಧಿಯಲ್ಲಿ 5 ವರ್ಷಗಳಲ್ಲಿ 15 ಲಕ್ಷ ಮನೆಗಳ ನಿರ್ಮಾಣ ಮಾಡಿದ್ದೇವೆ. ಆದರೆ ಬಿಜೆಪಿ ಸರಕಾರದ 3 ವರ್ಷಗಳ ಅಧಿಕಾರವಧಿಯಲ್ಲಿ ಒಂದೇ ಒಂದೂ ಮನೆಯನ್ನೂ ನಿರ್ಮಾಣ ಮಾಡಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ನಿರ್ಮಿಸಿದ್ದ ಮನೆಗಳಿಗೆ 2, 3ನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಏನೂ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ, ಆರ್‍ಟಿಐ, ನರೇಗಾ, ಆರ್‍ಟಿಇ, ಆಹಾರ ಭದ್ರತಾ ಕಾಯ್ದೆಯಂತಹ ಜನಪರ ಯೋಜನೆಗಳನ್ನು ಜಾರಿ ಮಾಡಿರುವುದು ವಾಜಪೇಯಿನಾ ಅಥವಾ ಮೋದಿನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕಳೆದ 7 ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ ಮಾಡಿರುವುದು ಬೆಲೆ ಏರಿಕೆ, ತೈಲಬೆಲೆ ಏರಿಕೆ, ನಿರುದ್ಯೋಗ ಸೃಷ್ಟಿ, ಆರ್ಥಿಕಕುಸಿತ ಮಾತ್ರ ಎಂದರು. 

ರಾಜ್ಯದಾದ್ಯಂತ ಅತಿವೃಷ್ಟಿ, ಅಕಾಲಿಕ ಮಳೆ, ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸಾವಿರಾರು ಮನೆಗಳು ನೆಲಸಮ ಗೊಂಡಿವೆ. ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಆದರೆ ರಾಜ್ಯ ಸರಕಾರ ಇದುವರೆಗೂ ಬೆಳೆ ಹಾನಿಯ ಸಮೀಕ್ಷೆಯನ್ನೂ ಮಾಡಿಲ್ಲ. ಸಂತ್ರಸ್ತ ರೈತರಿಗೆ ಬಿಡಿಗಾಸು ಪರಿಹಾರವನ್ನೂ ನೀಡಿಲ್ಲ. ಪರಿಹಾರ ಕೇಳಿದರೆ ಖಜಾನೆಯಲ್ಲಿ ಹಣವಿಲ್ಲ ಎನ್ನುತ್ತಿದ್ದಾರೆ. ಇಂತಹ ಸರಕಾರದ ಮಂತ್ರಿಗಳು, ಶಾಸಕರಿಗೆ ಜನರ ಬಳಿ ಮತಯಾಚನೆ ಮಾಡಲು ನೈತಿಕತೆ ಎಲ್ಲಿದೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 15 ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಈ ಪೈಕಿ ಚಿಕ್ಕಮಗಳೂರು ಕ್ಷೇತ್ರದಿಂದ ಗಾಯತ್ರಿ ಶಾಂತೇಗೌಡ ಅವರ ಗೆಲುವು ಶತಸಿದ್ಧ. ಕಾಂಗ್ರೆಸ್ ಸರಕಾರ ಸ್ಥಳೀಯ ಸಂಸ್ಥೆಗಳ ಶಕ್ತಿ ತುಂಬಲು ನೀಡಿರುವ ಕೊಡುಗೆಗಳ ಆಧಾರದ ಮೇಲೆ ಜಿಲ್ಲೆಯ ಮತದಾರರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.


SHARE THIS

Author:

0 التعليقات: