Friday, 24 December 2021

ಕತುವಾ ಪ್ರಕರಣ: ಸಾಕ್ಷ್ಯ ನಾಶ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಎಸ್‌ಐ ಶಿಕ್ಷೆ ವಜಾಗೊಳಿಸಿ ಜಾಮೀನು ನೀಡಿದ ನ್ಯಾಯಾಲಯ


 ಕತುವಾ ಪ್ರಕರಣ: ಸಾಕ್ಷ್ಯ ನಾಶ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಎಸ್‌ಐ ಶಿಕ್ಷೆ ವಜಾಗೊಳಿಸಿ ಜಾಮೀನು ನೀಡಿದ ನ್ಯಾಯಾಲಯ

ಹೊಸದಿಲ್ಲಿ: ಕತುವಾ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿತರಾಗಿದ್ದ ಜಮ್ಮು ಮತ್ತು ಕಾಶ್ಮೀರದ ಎಸ್‌ಐ ಒಬ್ಬರ ಶಿಕ್ಷೆಯನ್ನು ವಜಾಗೊಳಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಅವರಿಗೆ ಜಾಮೀನು ಕೂಡ ಮಂಜೂರುಗೊಳಿಸಿದೆ ಎಂದು thequint.com ವರದಿ ಮಾಡಿದೆ.

2018ರಲ್ಲಿ ನಡೆದ ಕತುವಾ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಆರೋಪಿ ಸಂಜಿ ರಾಮ್‌ನಿಂದ 4 ಲಕ್ಷ ರೂ. ಲಂಚ ಪಡೆದ ಪ್ರಕರಣದಲ್ಲಿ ಎಸ್‌ಐ ಆನಂದ್ ದತ್ತಾ ದೋಷಿಯೆಂದು ಘೋಷಿತರಾಗಿದ್ದರಲ್ಲದೆ ಪಂಜಾಬ್‌ನ ಪಠಾಣ್‌ಕೋಟ್ ನ್ಯಾಯಾಲಯ ಅವರಿಗೆ ಜೂನ್ 2019ರಲ್ಲಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಆದರೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ದತ್ತಾ ಅವರ ಉಳಿದ ಶಿಕ್ಷೆ ಅವಧಿಯನ್ನು ವಜಾಗೊಳಿಸಿ ಅವರಿಗೆ ಜಾಮೀನು ನೀಡಿದೆ.  ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದತ್ತಾ ಅವರು ಹೈಕೋರ್ಟ್ ಕದವನ್ನು ಈ ಹಿಂದೆ ತಟ್ಟಿದ್ದರಲ್ಲದೆ ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದಿದ್ದರು. ಕಥುವಾ ಪ್ರಕರಣ ನಡೆದಾಗ ದತ್ತಾ ಅವರು ಅಲ್ಲಿನ ಠಾಣಾಧಿಕಾರಿ ಆಗಿರಲಿಲ್ಲ ಎಂಬ ಅಂಶವನ್ನೂ ಅವರ ವಕೀಲರು ನ್ಯಾಯಾಲಯದ ಮುಂದೆ ಹೇಳಿದ್ದರು.

ಈ ಪ್ರಕರಣದಲ್ಲಿ ಹೆಡ್ ಕಾನ್‌ಸ್ಟೇಬಲ್ ತಿಲಕ್ ರಾಜ್ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ಸುರೇಂದರ್ ವರ್ಮಾಗೆ ಕೂಡ ಐದು ವರ್ಷ ಶಿಕ್ಷೆಯಾಗಿದೆ.

ಜನವರಿ 2018ರಲ್ಲಿ ನಡೆದ ಈ ಪ್ರಕರಣದಲ್ಲಿ  ಬಕರ್ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರಗೈದು ದೇವಳ ಪ್ರಾಂಗಣದಲ್ಲಿ ಆಕೆಯ ಹತ್ಯೆ ನಡೆಸಲಾಗಿತ್ತು.


SHARE THIS

Author:

0 التعليقات: