Monday, 13 December 2021

ಊಟಕ್ಕೆ ಹೊರಟಿದ್ದ ಯುವಕನ ಹತ್ಯೆ: ಮೂವರಿಗೆ ಜೈಲು

ಊಟಕ್ಕೆ ಹೊರಟಿದ್ದ ಯುವಕನ ಹತ್ಯೆ: ಮೂವರಿಗೆ ಜೈಲು

ಬೆಂಗಳೂರು : ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿಗಾಗಿ ನಗರಕ್ಕೆ ಬಂದಿದ್ದ ಜಗದೀಪ್ ಸಿಂಗ್ ಎಂಬುವರನ್ನು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ನಗರ ನ್ಯಾಯಾಲಯ (ಸಿಸಿಎಚ್- 57ನೇ) ಆದೇಶ ಹೊರಡಿಸಿದೆ.

ಪ್ರಕರಣದ ಮೊದಲ ಅಪರಾಧಿ ಗುರಯ್ಯ ಅಲಿಯಾಸ್ ಚಟ್ಟಿಬಾಬು ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಲಾಗಿದೆ. ಎರಡನೇ ಅಪರಾಧಿ ಜಿ. ಪ್ರವೀಣ್ ಹಾಗೂ ಮೂರನೇ ಅಪರಾಧಿ ಎಂ. ಕಿಶೋರ್‌ನನ್ನು 10 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಪಡಿಸಲಾಗಿದೆ.

ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಕೆ.ಜಿ. ಚಿಂತಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ವೀಣಾ ವಾದಿಸಿದ್ದರು.

ಪ್ರಕರಣದ ವಿವರ: ಉತ್ತರ ಭಾರತದ ಜಗದೀಪ್ ಸಿಂಗ್ ಹಾಗೂ ಸ್ನೇಹಿತರು, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಅಧ್ಯಯನಕ್ಕೆಂದು ನಗರಕ್ಕೆ ಬಂದಿದ್ದರು. ಯಶವಂತಪುರ ಬಳಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು.

2018ರ ಅಕ್ಟೋಬರ್ 19ರಂದು ರಾತ್ರಿ ಊಟಕ್ಕೆಂದು ಹೋಟೆಲ್‌ಗೆ ಹೋಗಲು ಮುಂದಾಗಿದ್ದ ಜಗದೀಪ್ ಹಾಗೂ ಸ್ನೇಹಿತರು, ಕೊಠಡಿಯಿಂದ ಹೊರಗೆ ಬಂದು ರಸ್ತೆಯಲ್ಲಿ ನಿಂತುಕೊಂಡಿದ್ದರು. ಅದೇ ಸಂದರ್ಭದಲ್ಲೇ ಅಪರಾಧಿಗಳಾದ ಚಟ್ಟಿಬಾಬು, ಪ್ರವೀಣ್ ಹಾಗೂ ಕಿಶೋರ್ ಸ್ಥಳಕ್ಕೆ ಬಂದಿದ್ದರು. ಜಗದೀಪ್ ಹಾಗೂ ಸ್ನೇಹಿತರನ್ನು ಅಪರಾಧಿಗಳು ಗುರಾಯಿಸಿದ್ದರು. ರಸ್ತೆಯಲ್ಲಿ ನಿಂತಿದ್ದನ್ನು ಪ್ರಶ್ನಿಸಿದ್ದರು.

ಅಷ್ಟಕ್ಕೆ ಜಗಳ ಶುರುವಾಗಿತ್ತು. ಅಪರಾಧಿಗಳು, ಚಾಕುವಿನಿಂದ ಜಗದೀಪ್ ಅವರ ದೇಹದ ಹಲವೆಡೆ ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದರು. ಸ್ನೇಹಿತರು ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಯಶವಂತಪುರ ಪೊಲೀಸರು, ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.SHARE THIS

Author:

0 التعليقات: