Monday, 6 December 2021

ಡಿಜೆ ಹಳ್ಳಿ ಗಲಭೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಡಿಜೆ ಹಳ್ಳಿ ಗಲಭೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ದೇವರ ಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜಿ ಹಳ್ಳಿ) ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಗಲಭೆ ಪ್ರಕರಣದ ಹಾನಿ ಅಂದಾಜಿಸಿ ನಷ್ಟದ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕ್ಲೇಮ್ ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳ ಸಂಬಂಧ ಹೆಚ್ಚಿನ ವಿಚಾರಣೆ ಅಗತ್ಯ ಕಂಡುಬರುತ್ತಿಲ್ಲ ಎಂದು ತಿಳಿಸಿ ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ ಸರಕಾರದ ಪರ ವಕೀಲ ಎಚ್.ಶಾಂತಿಭೂಷಣ್ ಗಲಭೆಗೆ ಸಂಬಂಧಿಸಿದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. 

ವರದಿ ಪರಿಶೀಲಿಸಿದ ಪೀಠ, ಸರಕಾರಕ್ಕೆ ಕೆಲ ನಿರ್ದೇಶನಗಳನ್ನು ನೀಡಿ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸುವುದಾಗಿ ತಿಳಿಸಿತು. ಇದಕ್ಕೂ ಮುನ್ನ ಅರ್ಜಿ ಇತ್ಯರ್ಥ ಪಡಿಸುವ ಕ್ರಮಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. 

ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಕುರಿತು ನಷ್ಟ ಅಂದಾಜಿಸಿ ಅದಕ್ಕೆ ಹೊಣೆ ನಿಗದಿ ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡಲಾಗಿದೆ. ಕ್ಲೇಮು ಕಮಿಷನರ್ ಈಗಾಗಲೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅರ್ಜಿಗಳನ್ನು ಮತ್ತಷ್ಟು ಕಾಲ ಉಳಿಸಿಕೊಳ್ಳುವ ಅಗತ್ಯವೇನಿದೆ. ಕ್ಲೇಮು ಕಮಿಷನರ್ ವರದಿ ಅನುಸಾರ ರಾಜ್ಯ ಸರಕಾರ ಗಲಭೆಯಲ್ಲಿ ನಷ್ಟ ಅನುಭವಿಸಿದವರಿಗೆ ತುರ್ತಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮೌಖಿಕವಾಗಿ ತಿಳಿಸಿತು. 


SHARE THIS

Author:

0 التعليقات: