Friday, 31 December 2021

ಉಡುಪಿ: ಹಿಜಾಬ್ ಧರಿಸಿದಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ!


ಉಡುಪಿ: ಹಿಜಾಬ್ ಧರಿಸಿದಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ!

ಉಡುಪಿ: ಹಿಜಾಬ್ ಧರಿಸಿದ ಕಾರಣಕ್ಕಾಗಿ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಳೆದ ಮೂರು ದಿನಗಳಿಂದ ತರಗತಿ ಪ್ರವೇಶ ನಿರಾಕರಿಸಿ ಹೊರಗಡೆ ನಿಲ್ಲಿಸಿರುವ ಘಟನೆ ನಡೆದಿದೆ.

ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಆರು ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಈ ಕಾರಣಕ್ಕೆ ಪ್ರಾಂಶುಪಾಲರು ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ನಿರಕಾರಿಸಿ, ಹೊರಗಡೆ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅದರಂತೆ ಕಳೆದ ಮೂರು ದಿನಗಳಿಂದ ಈ ಆರು ಮಂದಿ ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬಂದು ಹೊರಗಡೆ ನಿಂತು ಅಲ್ಲೇ ಊಟ ಮಾಡಿ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾಲೇಜಿನ ನಿಯಮದಂತೆ ಹಿಜಾಬ್ ತೆಗೆದು ಕಾಲೇಜಿಗೆ ಬಂದರೆ ಮಾತ್ರ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಅಲ್ಲದೆ ಕಾಲೇಜಿನಲ್ಲಿ ಇತರ ವಿದ್ಯಾರ್ಥಿನಿಯರು ತುಳು, ಕೊಂಕಣಿ ಭಾಷೆ ಮಾತನಾಡಿದರೂ ನಾವು ಮಾತ್ರ ಉರ್ದು, ಬ್ಯಾರಿ ಭಾಷೆಗಳನ್ನು ಮಾತನಾಡದಂತೆ ತಾಕೀತು ಮಾಡಲಾಗುತ್ತದೆ. ಇತರ ಧರ್ಮದಂತೆ ನಮ್ಮ ಧರ್ಮದ ಹಕ್ಕುಗಳನ್ನು ಗೌರವಿಸುವ ಕೆಲಸವನ್ನು ಕಾಲೇಜು ಮಾಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.


ನಮ್ಮ ಕಾಲೇಜಿನಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೇವಲ ಆರು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಆ ಕಾರಣಕ್ಕೆ ಅವರನ್ನು ತರಗತಿಗೆ ತೆಗೆದುಕೊಂಡಿಲ್ಲ. ಇವರು ಹಿಜಾಬ್ ತೆಗೆದಿರಿಸಿ ಯಾವಾಗ ಬೇಕಾದರೂ ತರಗತಿಗೆ ಬರಬಹುದು. ಇವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ನಮ್ಮ ನಿಯಮವನ್ನು ಒಪ್ಪಿದ್ದಾರೆ.

- ರುದ್ರೆಗೌಡ, ಪ್ರಾಂಶುಪಾಲರು

(ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು)


ಕಾಲೇಜಿನ ಇನ್ನೊಂದು ಬ್ಲಾಕ್‌ನಲ್ಲಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಅದೇ ರೀತಿ ನಾವು ಕೂಡ ಮೂರು ನಾಲ್ಕು ದಿನಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮನ್ನು ತರಗತಿಗೆ ಬಿಡುತ್ತಿಲ್ಲ. ನಾವು ಬೇರೆ ಏನನ್ನು ಕೇಳುತ್ತಿಲ್ಲ. ಹಿಜಾಬ್ ಹಾಕಲು ನಮಗೆ ಅವಕಾಶ ನೀಡಬೇಕು.

-ವಿದ್ಯಾರ್ಥಿನಿಯರು


SHARE THIS

Author:

0 التعليقات: