'ಒಮೈಕ್ರಾನ್' ಭೀತಿ: ನೂತನ ಮಾರ್ಗಸೂಚಿ ಜಾರಿಗೊಳಿಸಿದ ಸರಕಾರ
ಬೆಂಗಳೂರು: ಕೋವಿಡ್ ನ ರೂಪಾಂತರಿತ ಹೊಸ ಪ್ರಭೇದ 'ಒಮೈಕ್ರಾನ್' ಸೋಂಕು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವರದಿಯಾಗಿರುವುದರಿಂದ ನೂತನ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪೋಷಕರು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಭಾಗವಹಿಸಲು ಅವಕಾಶ ಇರುತ್ತದೆ. ಅದೇರೀತಿ ಸಿನೆಮಾ ಥಿಯೇಟರ್, ಮಾಲ್ ಗಳಿಗೆ 2 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಅವಕಾಶ ಎಂದು ಸಚಿವರು ವಿವರಿಸಿದರು.
ಶಾಲೆ-ಕಾಲೇಜುಗಳಲ್ಲಿ ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ ಎಂದವರು ತಿಳಿಸಿದರು.
ಪ್ರತಿನಿತ್ಯ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ. 2ನೇ ಅಲೆ ಸಂದರ್ಭ ಸಜ್ಜುಗೊಳಿಸಿದಂತೆ ಆಕ್ಸಿಜನ್ ಯುಕ್ತ ಬೆಡ್, ಐಸಿಯು ಬೆಡ್ ವ್ಯವಸ್ಥೆಯನ್ನು ಮತ್ತೆ ಸಿದ್ಧಪಡಿಸಬೇಕು. ಆಕ್ಸಿಜನ್ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಆಕ್ಸಿಜನ್ ಲಭ್ಯತೆ, ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಗೆ ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಕೋವಿಡ್ ಕಂಟ್ರೋಲ್ ರೂಂ ಅನ್ನು ಮತ್ತೆ ಆರಂಭಿಸಲಾಗುವುದು ಎಂದವರು ಹೇಳಿದರು.
Sabheyalli baree bayi maatininda helidre saaladu nudidante nadesbeku
ReplyDelete