Wednesday, 15 December 2021

ದತ್ತ ಜಯಂತಿ; ಬಿಗಿ ಪೊಲೀಸ್‌ ಭದ್ರತೆ


ದತ್ತ ಜಯಂತಿ; ಬಿಗಿ ಪೊಲೀಸ್‌ ಭದ್ರತೆ

ಚಿಕ್ಕಮಗಳೂರು: ದತ್ತ ಜಯಂತಿ ಡಿ.17ರಿಂದ 19 ರವರೆಗೆ ಜರುಗಲಿದ್ದು, ಶಾಂತಿ-ಸುವ್ಯವಸ್ಥೆ ನಿರ್ವಹಣೆಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದ್ದಾರೆ.

ಒಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮೂವರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಡಿಎಸ್‌ಪಿ-11, ಪೊಲೀಸ್‌ ಇನ್‌ಸ್ಪೆಕ್ಟರ್‌- 31, ಪಿಎಸ್‌ಐ- 141, ಹೆಡ್‌ ಕಾನ್‌ಸ್ಟೆಬಲ್- 718, ಕಾನ್‌ಸ್ಟೆಬಲ್‌- 1103, ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌- 132 ಹಾಗೂ ಗೃಹರಕ್ಷಕ ಸಿಬ್ಬಂದಿ- 500 ಮಂದಿ ಬಂದೋಬಸ್ತ್‌ ಕಾರ್ಯನಿರ್ವಹಿಸುವರು.

ಒಟ್ಟು 66 ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ 23 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಡಿ.15ರಿಂದ 20ರಂದು ಬೆಳಿಗ್ಗೆವರೆಗೆ ದಿನದ 24 ಗಂಟೆಯೂ ಈ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿರುತ್ತಾರೆ.

ನಗರದ ವಿವಿಧೆಡೆ 73 ಸಿ.ಸಿ ಟಿವಿ ಕ್ಯಾಮೆರಾ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಪ್ರದೇಶದಲ್ಲಿ 47 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎರಡು ಡ್ರೋನ್‌ಗಳನ್ನು ಬಳಕೆ ಮಾಡಲಾಗುವುದು ಎಂದರು.

ಮದ್ಯ ಮಾರಾಟ ನಿಷೇಧ: ಶೃಂಗೇರಿ, ಕೊಪ್ಪ ಮತ್ತು ಎನ್‌.ಆರ್‌.ಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಡಿ.15ರಂದು ಬೆಳಿಗ್ಗೆ 6 ಗಂಟೆಯಿಂದ 17ರಂದು ರಾತ್ರಿ 12 ಗಂಟೆವರೆಗೆ, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಡಿ.16ರಂದು ಬೆಳಿಗ್ಗೆ 6 ಗಂಟೆಯಿಂದ 17ರಂದು ರಾತ್ರಿ 12 ಗಂಟೆವರೆಗೆ, ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಡಿ.17ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಡಿ.16ರಿಂದ 20ರವರಿಗೆ ಬೆಳಿಗ್ಗೆ 6 ಗಂಟೆವರೆಗೆ ಗಿರಿ ಶ್ರೇಣಿಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಹೊನ್ನಮ್ಮನಹಳ್ಳ, ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಗಿರಿ ಶ್ರೇಣಿ ಭಾಗದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸ ಲಾಗಿದೆ. ಗುಹೆ ಒಳಭಾಗದಲ್ಲಿ ಕ್ಯಾಮೆರಾ, ವಿಡಿಯೊ, ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪ: 'ದತ್ತ ಜಯಂತಿ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ' ಎಂದು ಕೊಪ್ಪ ಉಪ ವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.

ಪಟ್ಟಣದಲ್ಲಿ ಬುಧವಾರ ದತ್ತ ಜಯಂತಿ ಅಂಗವಾಗಿ ಪೊಲೀಸ್ ಪಥ ಸಂಚಲನ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿ, 'ಭದ್ರತೆ ದೃಷ್ಟಿಯಿಂದ ಹೊರ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿದೆ. ತಾಲ್ಲೂಕಿನ ಗಡಿಕಲ್, ಕುದುರೆಗುಂಡಿ, ಹರಿಹರಪುರ, ಜಯಪುರದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ' ಎಂದು ಹೇಳಿದರು.

'ಹಿಂದೂ ಸಂಗಮ ಕಾರ್ಯಕ್ರಮದ ಭದ್ರತೆಯಲ್ಲಿ ಹೊರ ಜಿಲ್ಲೆಯ 60 ಕ್ಕೂ ಹೆಚ್ಚು ಪೊಲೀಸರು ಕರ್ತವ್ಯದಲ್ಲಿ ಇದ್ದಾರೆ. ದತ್ತ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಬೇಕು' ಎಂದರು.

'ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಪಥ ಸಂಚಲನ ನಡೆಸಲಾಗಿದೆ. ಈ ವೇಳೆ 80 ಮಂದಿ ಪೊಲೀಸರು ಪಾಲ್ಗೊಂಡಿದ್ದರು' ಎಂದರು.

ಇನ್‌ಸ್ಪೆಕ್ಟರ್ ಗುರಣ್ಣ ಹೆಬ್ಬಾಳ್, ಕೊಪ್ಪ ಪಿಎಸ್‌ಐ ಶ್ರೀನಾಥ್ ರೆಡ್ಡಿ, ಪಿಎಸ್‌ಐ ಜ್ಯೋತಿ, ಪಿಎಸ್‌ಐ ವಿಠಲ್, ಕೊಪ್ಪ ಉಪ ವಿಭಾಗ ವ್ಯಾಪ್ತಿಯ ಪೊಲೀಸರು ಪಾಲ್ಗೊಂಡಿದ್ದರು.SHARE THIS

Author:

0 التعليقات: