ದ್ವಿತೀಯ ಟೆಸ್ಟ್: ಭಾರತಕ್ಕೆ ನ್ಯೂಝಿಲ್ಯಾಂಡ್ ವಿರುದ್ಧ ಭರ್ಜರಿ ಜಯ, ಸರಣಿ ಕೈವಶ
ಮುಂಬೈ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತವು ನ್ಯೂಝಿಲ್ಯಾಂಡ್ ವಿರುದ್ಧ 372 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.
ಕಾನ್ಪುರದಲ್ಲಿ ನಡೆದಿದ್ದ ಮೊದಲ ಪಂದ್ಯವು ರೋಚಕ ಡ್ರಾನಲ್ಲಿ ಕೊನೆಗೊಂಡಿತ್ತು.
ಗೆಲ್ಲಲು 540 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ 4ನೇ ದಿನವಾದ ಸೋಮವಾರ ಬೆಳಗ್ಗೆ ಎರಡನೇ ಇನಿಂಗ್ಸ್ ನಲ್ಲಿ ಕೇವಲ 167 ರನ್ ಗೆ ಆಲೌಟಾಯಿತು. ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(4-34) ಹಾಗೂ ಕಿರಿಯ ಸ್ಪಿನ್ನರ್ ಜಯಂತ್ ಯಾದವ್(4-49)ತಲಾ 4 ವಿಕೆಟ್ ಗಳ ಮೂಲಕ ಕಿವೀಸನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
ಕಿವೀಸ್ ಪರ ಮಿಚೆಲ್(60) ಸರ್ವಾಧಿಕ ಸ್ಕೋರ್ ಗಳಿಸಿದರೆ, ಹೆನ್ರಿ ನಿಕೊಲ್ಸ್(44).ವಿಲ್ ಯಂಗ್)20) ಹಾಗೂ ರಚಿನ್ ರವೀಂದ್ರ(18) ಎರಡಂಕೆಯ ಸ್ಕೋರ್ ಗಳಿಸಿದರು.
ಅಶ್ವಿನ್ ಪಂದ್ಯದಲ್ಲಿ 42 ರನ್ ನೀಡಿ ಒಟ್ಟು 8 ವಿಕೆಟ್ ಗಳನ್ನು ಪಡೆದರು. ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆಯದೇ ಶ್ರೇಷ್ಠ ಬೌಲಿಂಗ್ ಮಾಡಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡರು. 2002ರಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯದ ಸ್ಪಿನ್ ದಂತಕತೆ ಶೇನ್ ವಾರ್ನ್(8-24) ಈ ಸಾಧನೆ ಮಾಡಿದ್ದ ಮೊದಲಿಗನಾಗಿದ್ದಾರೆ.
0 التعليقات: