Friday, 31 December 2021

ದೆಹಲಿ: ಕೋವಿಡ್ ಸೋಂಕು ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ದೆಹಲಿ: ಕೋವಿಡ್ ಸೋಂಕು ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ಹೊಸದಿಲ್ಲಿ: ಹೊಸ ವರ್ಷದ ಆರಂಭದ ಮುನ್ನಾ ದಿನವಾದ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, 1796 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಗುರುವಾರದ ಸಂಖ್ಯೆಗೆ (1313) ಹೋಲಿಸಿದರೆ ಶೇಕಡ 36ರಷ್ಟು ಅಧಿಕ. ಒಮೈಕ್ರಾನ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಏರಿಕೆ ಪ್ರವೃತ್ತಿ ಕಂಡುಬಂದಿದೆ.

ದೆಹಲಿಯಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಏರಿಕೆಯಾಗಿರುವುದು ಏಳು ತಿಂಗಳಲ್ಲಿ ಇದೇ ಮೊದಲು. ಹೊಸ ಪ್ರಬೇಧದ ವೈರಸ್ ಸೋಂಕು ನಿಧಾನವಾಗಿ ಸಮುದಾಯಕ್ಕೆ ಹರಡುತ್ತಿದ್ದು, ದೆಹಲಿಯಲ್ಲಿ ವಿಶ್ಲೇಷಣೆಗೆ ಗುರಿಪಡಿಸಿದ ಪ್ರಕರಣಗಳ ಪೈಕಿ ಶೇಕಡ 54ರಷ್ಟು ಪ್ರಕರಣಗಳು ಹೊಸ ಪ್ರಬೇಧಕ್ಕೆ ಸೇರಿದವು ಎಂದು ರಾಜ್ಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಪ್ರಕಟಿಸಿದ್ದಾರೆ.

ಈ ಬೆಳವಣಿಗೆಗಳ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಹೊಸ ವರ್ಷದ ಶುಭಾಶಯ ವಿನಿಮಯ ಸೇರಿದಂತೆ ಎಲ್ಲ ಸಭೆ ಸಮಾರಂಭಗಳನ್ನು ರದ್ದುಪಡಿಸಲಾಗಿದೆ. ಶಾಲೆ ಮತ್ತು ಸಿನಿಮಾ ಮಂದಿರಗಳನ್ನು ಮುಚ್ಚಲಾಗಿದ್ದು, ಎಲ್ಲೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದೆಹಲಿಯಲ್ಲಿ ಧನಾತ್ಮಕತೆ ದರ ಈಗಾಗಲೇ 2.44ನ್ನು ತಲುಪಿದೆ.

ಅಂತರರಾಷ್ಟ್ರೀಯ ವಿಮಾನಗಳಿಂದಾಗಿ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಅಲೆಗಳ ಸಂದರ್ಭದಲ್ಲಿ ಕೂಡಾ ಒಳಬರುವ ವಿಮಾನಗಳ ಮೂಲಕ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದವು. ಹಲವು ಮಂದಿಯ ತಪಾಸಣೆ ನಡೆಸಿದಾಗ ವಿಮಾನ ನಿಲ್ದಾಣಗಳಲ್ಲಿ ನೆಗೆಟಿವ್ ಬಂದ ತಕ್ಷಣ ಅವರನ್ನು ಮನೆಗಳಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಮನೆಗೆ ತಲುಪಿದ ಬಳಿಕ ಅವರನ್ನು ಪರೀಕ್ಷೆಗೆ ಗುರಿಡಿಸಿದಾಗ ಪಾಸಿಟಿವ್ ಪತ್ತೆಯಾಗಿದೆ. ಈ ಹಂತದಲ್ಲಿ ಅವರು ಕುಟಂಬ ಸದಸ್ಯರಿಗೆ ಸೋಂಕು ಹರಡಿರುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.

ಕಳೆದ ವಾರದ ವರೆಗೂ ವಾರಕ್ಕೆ ಕೇವಲ 100-200 ಪ್ರಕರಣಗಳು ಮಾತ್ರ ದೆಹಲಿಯಲ್ಲಿ ವರದಿಯಾಗಿತ್ತು. ಕಳೆದ ಕೆಲ ದಿನಗಳಿಂದ ದಿಢೀರ್ ಏರಿಕೆಯಾಗಿದ್ದು, ಗುರುವಾರ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿತ್ತು.

ಮುಂಬೈನಲ್ಲಿ 5428 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ 1200ಕ್ಕೂ ಹೆಚ್ಚು ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ.SHARE THIS

Author:

0 التعليقات: