Thursday, 23 December 2021

ಹಿಂದೂ ರಾಷ್ಟ್ರಕ್ಕಾಗಿ ಮುಸ್ಲಿಮರ ಹತ್ಯೆಗೆ ಬಹಿರಂಗ ಕರೆ ನೀಡಿದ ಸಂತರು, ಬಿಜೆಪಿ ನಾಯಕರು: ವ್ಯಾಪಕ ಆಕ್ರೋಶ


 ಹಿಂದೂ ರಾಷ್ಟ್ರಕ್ಕಾಗಿ ಮುಸ್ಲಿಮರ ಹತ್ಯೆಗೆ ಬಹಿರಂಗ ಕರೆ ನೀಡಿದ ಸಂತರು, ಬಿಜೆಪಿ ನಾಯಕರು: ವ್ಯಾಪಕ ಆಕ್ರೋಶ

ಹೊಸದಿಲ್ಲಿ: ಹಿಂದುತ್ವ ಗುಂಪಿನ ಸದಸ್ಯರು, ಕೆಲ ಸಂತರು, ಒಬ್ಬ ಪತ್ರಕರ್ತ ಹಾಗೂ ಒಬ್ಬ ಬಿಜೆಪಿ ನಾಯಕ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿ ಭಾಷಣ ಮಾಡುತ್ತಿರುವ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಕುರಿತು ಯಾವುದೇ ಪ್ರಕರಣಗಳು ಇದುವರೆಗೆ ದಾಖಲಾಗಿಲ್ಲ ಎಂದು ndtv.com ವರದಿ ಮಾಡಿದೆ.

ಒಂದು ವೀಡಿಯೋದಲ್ಲಿ ಸುದರ್ಶನ್ ನ್ಯೂಸ್ ಮುಖ್ಯ ಸಂಪಾದಕ ಸುರೇಶ್ ಚಾವ್ಹಂಕೆ  ನೆರೆದಿದ್ದ ಜನರ ಗುಂಪಿಗೆ "ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸಲು  ಹುತಾತ್ಮರಾಗಿ ಹಾಗೂ ಹತ್ಯೆ ನಡೆಸಿ"   ಎಂದು ಪ್ರತಿಜ್ಞಾವಿಧಿ ಬೋಧಿಸುತ್ತಿರುವುದು ಕೇಳಿಸುತ್ತದೆ.  ದಿಲ್ಲಿಯಲ್ಲಿ ಡಿಸೆಂಬರ್ 19ರಂದು ನಡೆದ ಹಿಂದು ಯುವ ವಾಹಿನಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

"ಈ ದೇಶವನ್ನು ಹಿಂದು ರಾಷ್ಟ್ರವನ್ನಾಗಿಸಲು ನಮ್ಮ ಕೊನೆ ಉಸಿರು ಇರುವ ತನಕ ನಾವು ಹೋರಾಡುತ್ತೇವೆ ಹಾಗೂ ಮಡಿಯುತ್ತೇವೆ ಹಾಗೂ ಅಗತ್ಯಬಿದ್ದರೆ ಹತ್ಯೆಯನ್ನೂ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ" ಎಂದು ಅವರು ಹೇಳಿದಾಗ ನೆರೆದ ಜನರು ಅದೇ ಮಾತುಗಳನ್ನು ಪುನರುಚ್ಛರಿಸುತ್ತಾರೆ.

ಈ ಕುರಿತು ಸುರೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿ "ಹಿಂದು ಯುವ ವಾಹಿನಿಯ ಸಿಂಹಗಳು ಮತ್ತು ಸಿಂಹಿಣಿಯರು ಹಿಂದು ರಾಷ್ಟ್ರಕ್ಕಾಗಿ ಪ್ರತಿಜ್ಞೆ ಕೈಗೊಂಡಿದ್ದಾರೆ" ಎಂದು ಬರೆದಿದ್ದಾರೆ. ಉತ್ತರ ಪ್ರದೇಶ ಸಚಿವ ರಾಜೇಶ್ವರ್ ಸಿಂಗ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೆಂದು ಸಾಮಾಜಿಕ ಜಾಲತಾಣಿಗರು ಎತ್ತಿ ತೋರಿಸಿದ್ದಾರೆ.

ಹರಿದ್ವಾರ : ಹರಿದ್ವಾರದಲ್ಲಿ ಡಿಸೆಂಬರ್ 17-19ರ ನಡುವೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಸಂತರು ಮುಸ್ಲಿಮರ ಹತ್ಯೆಗೆ ಬಹಿರಂಗವಾಗಿ ಕರೆನೀಡಿದ್ದಾರೆ ಹಾಗೂ ಹಿಂದುಗಳಿಗೆ ಶಸ್ತ್ರ ಖರೀದಿಸುವಂತೆ ಹೇಳಿದ್ದಾರೆ.

ದಿಲ್ಲಿಯ ಜಂತರ್ ಮಂತರ್ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ನೀಡಿದ್ದಕ್ಕಾಗಿ ಆಗಸ್ಟ್ ತಿಂಗಳಿನಲ್ಲಿ ಬಂಧಿತರಾಗಿದ್ದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಹರಿದ್ವಾರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಭಗ್ವ ಸಂವಿಧಾನ್ ಅಥವಾ ಕೇಸರಿ ಸಂವಿಧಾನವನ್ನು ಪ್ರಸ್ತುತ ಪಡಿಸಿದರು.

ಈ ಹಿಂದೆ ಹಲವು ಪ್ರಚೋದನಾತ್ಮಕ ಮಾತುಗಳನ್ನಾಡಿದ ಉದಾಹರಣೆಯಿರುವ ಯತಿ ನರಸಿಂಗಾನಂದ ಸರಸ್ವತಿ ಮಾತನಾಡಿ "ಆರ್ಥಿಕ ಬಹಿಷ್ಕಾರ ಒಂದೇ ಸಾಲದು, ಶಸ್ತ್ರ ಕೈಗೆತ್ತಿಕೊಳ್ಳದೆ ಯಾವುದೇ ಸಮುದಾಯ ಉಳಿಯುವುದಿಲ್ಲ ಖಡ್ಗಗಳು ಕೆಲಸ ಮಾಡದು, ಅವುಗಳು ವೇದಿಕೆಯಲ್ಲಿ ಮಾತ್ರ ಚೆನ್ನಾಗಿ ಕಾಣುತ್ತವೆ, ನಿಮ್ಮ ಶಸ್ತ್ರಗಳನ್ನು ನವೀಕರಿಸಬೇಕು ಹೆಚ್ಚು ಮಕ್ಕಳು ಮತ್ತು ಉತ್ತಮ ಶಸ್ತ್ರಗಳು ಮಾತ್ರ ನಿಮ್ಮನ್ನು ರಕ್ಷಿಸಬಲ್ಲದು" ಎಂದಿದ್ದಾರೆ.


SHARE THIS

Author:

1 comment: