ಜನರಲ್ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ಆರೋಪ: ಮಂಗಳೂರಿನಲ್ಲಿ ಮೂರು ಪ್ರಕರಣ ದಾಖಲು
ಮಂಗಳೂರು: ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವಿಗೆ ಸಂಭ್ರಮಾಚರಣೆ ಮಾಡಿದ ಆರೋಪದಲ್ಲಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಮೂರು ಫೇಸ್ಬುಕ್ ಖಾತೆಗಳಲ್ಲಿನ ಪೋಸ್ಟ್ಗಳಿಗೆ ಸಂಬಂಧಿಸಿ ದೂರು ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ಮಾಡುವುದನ್ನು ಸಹಿಸಲಾಗದು. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸೂಚನೆ ನೀಡಿದ್ದರು. ಅದೇರೀತಿ ಸದ್ಯಕ್ಕೆ ಮೂರು ಫೇಸ್ಬುಕ್ ಪೋಸ್ಟ್ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆ ಖಾತೆಗಳು ಯಾರದ್ದು, ಅವುಗಳ ಮೂಲ, ಅವು ಅಸಲಿ ಖಾತೆಗಳೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಿಪಿನ್ ರಾವತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿಯಾಗಿ ಬರಹ ಬರೆದಿದ್ದಾರೆಂದು ಆರೋಪಿಸಿ ಸುಶಾಂತ್ ಎಂಬ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇಲೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ವಹಿಸಲಾಗುತ್ತಿದೆ. ದೂರಿನಲ್ಲಿ ಆರೋಪಿಸಿರುವ ಫೇಸ್ಬುಕ್ ಖಾತೆದಾರರಲ್ಲಿ ಒಬ್ಬರು ಬೆಂಗಳೂರು ಮೂಲದವರು, ಮತ್ತೊಬ್ಬರು ಕಾರ್ಕಳದವರು ಇನ್ನೊಂದು ಖಾತೆ ಅಪರಿಚಿತವಾಗಿದೆ. ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
0 التعليقات: