Wednesday, 22 December 2021

ಮಾಧ್ಯಮ ಸ್ವಾತಂತ್ರ್ಯ ಸೂಚಕದಲ್ಲಿ ಭಾರತಕ್ಕೆ ಕಡಿಮೆ ಶ್ರೇಣಿ: "ಸಣ್ಣಮಟ್ಟದ ಸಮೀಕ್ಷೆ" ಎಂದ ಕೇಂದ್ರ ಸರಕಾರ


 ಮಾಧ್ಯಮ ಸ್ವಾತಂತ್ರ್ಯ ಸೂಚಕದಲ್ಲಿ ಭಾರತಕ್ಕೆ ಕಡಿಮೆ ಶ್ರೇಣಿ: "ಸಣ್ಣಮಟ್ಟದ ಸಮೀಕ್ಷೆ" ಎಂದ ಕೇಂದ್ರ ಸರಕಾರ

ಹೊಸದಿಲ್ಲಿ: ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆ ಹೊರತಂದಿರುವ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಕಡಿಮೆ ರ್ಯಾಂಕಿಂಗ್ ಕುರಿತು ಕೇಂದ್ರ ಸರಕಾರ ತನ್ನ ಅಸಮಾಧಾನ ಹೊರಗೆಡಹಿದೆಯಲ್ಲದೆ ಈ ಸೂಚ್ಯಂಕಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಈ ರ್ಯಾಂಕಿಂಗ್ ಅನ್ನು ಸಣ್ಣ ಮಟ್ಟದ ಸಮೀಕ್ಷೆ ನಡೆಸಿ ತಯಾರಿಸಲಾಗಿದೆ ಹಾಗೂʼಪ್ರಜಾಪ್ರಭುತ್ವದ ಮೂಲಭೂತ ಅವಶ್ಯಕತೆಗಳಿಗೆʼ ಮಹತ್ವ ನೀಡಿಲ್ಲ ಎಂದು ಕೇಂದ್ರ ವಾದಿಸಿದೆ.

ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ರ್ಯಾಂಕಿಂಗ್ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್ ಮೇಲಿನಂತೆ ಹೇಳಿದ್ದಾರೆ.

ಈ ಸೂಚ್ಯಂಕದಲ್ಲಿ ಭಾರತಕ್ಕೆ ದೊರೆತ ಕಡಿಮೆ ರ್ಯಾಂಕಿಂಗ್‍ಗೆ ಏನು ಕಾರಣ ಹಾಗೂ ಈ ನಿಟ್ಟಿನಲ್ಲಿ ಪರಿಹಾರ ಕ್ರಮಕೈಗೊಳ್ಳಲಾಗಿದೆಯೇ ಎಂದು ಸಚಿವರನ್ನು ಪ್ರಶ್ನಿಸಲಾಗಿತ್ತು.

ಇದಕ್ಕೆ ಉತ್ತರಿಸಿದ ಸಚಿವರು ಈ ರ್ಯಾಂಕಿಂಗ್ ಅನ್ನು ಸರಕಾರ ಒಪ್ಪುವುದಿಲ್ಲ ಹಾಗೂ ಅದರಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಎಂದು ಹೇಳಿದ್ದಾರೆ. ಸಮೀಕ್ಷೆಗಾಗಿ ಸಂಘಟನೆಯು ʼಪ್ರಶ್ನಾರ್ಹ ವಿಧಾನʼವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರಲ್ಲದೆ ಮಾಧ್ಯಮ ಸ್ವಾತಂತ್ರ್ಯ ಕುರಿತಾದ ನಿಖರ ವ್ಯಾಖ್ಯಾನವನ್ನು ಸಂಸ್ಥೆ ಹೊಂದಿಲ್ಲ ಎಂದೂ ಹೇಳಿದರು.

ದೇಶದಲ್ಲಿ ಹಲವು ಪತ್ರಕರ್ತರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿರುವ ಅಂಶದ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳನ್ನು ತಡೆಯುವ ಹಾಗೂ ತನಿಖೆ ನಡೆಸುವ ಜವಾಬ್ದಾರಿ ಆಯಾಯ ರಾಜ್ಯ ಸರಕಾರಗಳದ್ದು ಎಂದು ಹೇಳಿದರು.

ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಯ ಮಾಧ್ಯಮ ಸ್ವಾತಂತ್ರ್ಯ ರ್ಯಾಂಕಿಂಗ್‍ನಲ್ಲಿ ಭಾರತ 180 ದೇಶಗಳ ಪೈಕಿ 142 ಸ್ಥಾನದಲ್ಲಿದೆ.


SHARE THIS

Author:

0 التعليقات: