ಪಟ್ಟು ಸಡಿಲಿಸಿದ ರೈತ ನಾಯಕರು: ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಗಳ ಕಾಲ ಸತತ ಹೋರಾಟ ನಡೆಸಿದ್ದ ರೈತ ಸಂಘಟನೆಗಳು, ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದುಕೊಂಡರು ಸಹ ಪ್ರತಿಭಟನೆ ಮುಂದುವರಿಸಿವೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈಗಾಗಲೇ ಅಧಿಕೃತವಾಗಿ ಕಾಯ್ದೆ ಹಿಂಪಡೆದುಕೊಂಡಿರುವ ಕುರಿತು ಒಪ್ಪಿಗೆ ಪಡೆಯಲಾಗಿದೆ ರಾಷ್ಟ್ರಪತಿಗಳು ಸಹ ತಮ್ಮ ಅಂಕಿತ ಹಾಕಿದ್ದಾರೆ.
ಇಷ್ಟಾದರೂ ಸಹ ರೈತರ ಪ್ರತಿಭಟನೆ ಮುಂದುವರೆದಿದೆ.
ಪ್ರತಿಭಟನೆ ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರೂ ಸಹ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನಿನ ಬಲ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಇದೀಗ ಬುಧವಾರದಂದು ಸಿಂಘು ಗಡಿಯಲ್ಲಿ ಸಭೆ ನಡೆಸಿದ ಬಳಿಕ ತಮ್ಮ ಪಟ್ಟನ್ನು ಕೊಂಚ ಸಡಿಲಗೊಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಾನೂನಿನ ವ್ಯಾಪ್ತಿಗೆ ತರುವ ಕುರಿತಂತೆ ಲಿಖಿತ ಭರವಸೆ ನೀಡಿದರೆ ತಾವು ಪ್ರತಿಭಟನೆ ಹಿಂಪಡೆಯುವ ಕುರಿತು ಚಿಂತನೆ ನಡೆಸುವುದಾಗಿ ರೈತ ನಾಯಕರುಗಳು ಹೇಳಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರವು ಸಹ ರೈತ ಸಂಘಟನೆಗಳ ಮುಖಂಡರ ಜೊತೆ ಮಾತುಕತೆಗೆ ಮುಂದಾಗಿದ್ದು, ಡಿಸೆಂಬರ್ 4 ರಂದು ನಡೆಯುವ ರೈತ ಮುಖಂಡರ ಸಭೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯುವ ಕುರಿತು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
0 التعليقات: