ವೈಷ್ಣೋದೇವಿಯಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು
ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಯಾತ್ರಾಸ್ಥಳವಾದ ಮಾತಾ ವೈಷ್ಣೋದೇವಿ ಭವನದಲ್ಲಿ ಶನಿವಾರ ಮುಂಜಾನೆ ಕಾಲ್ತುಳಿತದ ಘಟನೆ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಘಟನೆ ಹಿನ್ನೆಲೆಯಲ್ಲಿ ಮಂದಿರಕ್ಕೆ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಧ್ಯರಾತ್ರಿಯ ಬಳಿಕ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಮಂದಿರದ ಮಂಡಳಿ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಮಾತಾ ವೈಷ್ಣೋದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸಾವಿನ ಬಗ್ಗೆ ವಿವರ ನೀಡಿದ ಕಟ್ರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಡಾ.ಗೋಪಾಲ್ ದತ್, ಇದುವರೆಗೆ ಆರು ಮಂತ್ರಿ ಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಿಖರವಾದ ಸಂಖ್ಯೆ ಇನ್ನೂ ತಿಳಿದಿಲ್ಲ. ಆರು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಗಾಯಗೊಂಡವರ ನಿಖರ ಸಂಖ್ಯೆಯೂ ಇನ್ನೂ ತಿಳಿದಿಲ್ಲ ಎಂದಿದ್ದಾರೆ.
ಕಟ್ರಾದಲ್ಲಿರುವ ಮಾತಾ ವೈಷ್ಣೋದೇವಿ ಭವನದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ಪೊಲೀಸರು ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಲ್ತುಳಿತಕ್ಕೆ ನಿರ್ದಿಷ್ಟ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಹೊಸ ವರ್ಷದ ಮೊದಲ ದಿನ ಈ ಪವಿತ್ರ ಮಂದಿರದಲ್ಲಿ ವೈಷ್ಣೋದೇವಿ ದರ್ಶನಕ್ಕಾಗಿ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಈ ಗುಹಾಮಂದಿರ ಕಟ್ರಾದ ತ್ರಿಕೂಟ ಬೆಟ್ಟದ ತುದಿಯಲ್ಲಿದೆ.
0 التعليقات: