ಅಕಾಲಿಕ ಮಳೆಯಿಂದ ಅಪಾರ ನಷ್ಟ: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನಯಾಪೈಸೆ ಇಲ್ಲ; ಸಿದ್ದರಾಮಯ್ಯ ಆರೋಪ
ಬೆಳಗಾವಿ: ರಾಜ್ಯದಲ್ಲಿ ಇತ್ತಿಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳ ನಷ್ಟ ಆಗಿದ್ದು, ನಾಡಿನ ರೈತರ ಕಷ್ಟ ಹೇಳತೀರದಾಗಿದೆ. ಆದರೆ, ಕೇಂದ್ರ ಸರಕಾರದಿಂದ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರದ ಹಣ ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲ ಪ್ರಶ್ನೋತ್ತರ ಅವಧಿಯ ಬಳಿಕ ಮಳೆ, ಪ್ರವಾಹ, ಅತಿವೃಷ್ಟಿಯಿಂದಾಗಿ ನಾಡಿನ ರೈತರು ಎದುರಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ನಿಳುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸತತ 3 ವರ್ಷಗಳು ಪ್ರವಾಹ, ಅತಿವೃಷ್ಟಿ ಹಾಗೂ ಕೆಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಕಂಡಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ಬಾರಿ ಪ್ರವಾಹ ಬಂದಿದೆ.
ಮೇ ತಿಂಗಳಲ್ಲಿ ಚೌಕ್ತೆ ಚಂಡಮಾರುತ, ಜುಲೈ-ಆಗಸ್ಟ್ನಲ್ಲಿ ಪ್ರವಾಹ ಹಾಗೂ ಅಕ್ಟೋಬರ್- ನವೆಂಬರ್ನಲ್ಲಿ ಅತಿವೃಷ್ಟಿ ಆಗಿದೆ. 60 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಈ ರೀತಿಯ ಮಳೆಯಾಗಿರಲಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳು ಅತಿವೃಷ್ಟಿಗೀಡಾಗಿವೆ ಎಂದು ತಿಳಿಸಿದರು.
ರಾಜ್ಯಾದ್ಯಂತ ರೈತರು 78 ಲಕ್ಷದ 83 ಸಾವಿದ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಇದರಲ್ಲಿ ಶೇ. 75 ರಷ್ಟು ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಶೇಂಗಾ, ಮೆಕ್ಕೆಜೋಳ, ಕಾಫಿ, ಮೆಣಸು, ಅಡಿಕೆ ಮುಂತಾದ ಹಣ್ಣು, ತರಕಾರಿ, ಹೂವು ಬೆಳೆದ ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ.
ಒಟ್ಟು ಈ ವರ್ಷ 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಪ್ರವಾಹ, ಅತಿವೃಷ್ಟಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ರೂ. 2.5 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅವರು ವಿವರಿಸಿದರು.
ಅಕ್ಟೋಬರ್-ನವೆಂಬರ್ ನಲ್ಲಿ ವಾಡಿಕೆಯಂತೆ 166 ಮಿ.ಮೀ ಮಳೆ ಆಗಬೇಕಿತ್ತು, ಆದರೆ ಈ ವರ್ಷ 307 ಮಿ.ಮೀ ಮಳೆಯಾಗಿದೆ. ಮುಂಗಾರು ಈ ತಿಂಗಳುಗಳಲ್ಲಿ ಕೈಸೇರಬೇಕಿದ್ದ ಮುಂಗಾರು ಬೆಳೆಯ ಫಸಲು ಸಂಪೂರ್ಣ ನಷ್ಟವಾಗಿದೆ.
ಹಿಂದಿನ ಯು.ಪಿ.ಎ ಸರಕಾರದ ಬಜೆಟ್ ಗಾತ್ರ, ಇಂದಿನ ಬಜೆಟ್ ಗಾತ್ರ, 2014-15 ರಲ್ಲಿ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮೇಲೆ ಸಂಗ್ರಹವಾಗುತ್ತಿದ್ದ ತೆರಿಗೆ ಹಾಗೂ ಈ ಸಾಲಿನಲ್ಲಿ ಸಂಗ್ರಹವಾಗಿರುವ ತೆರಿಗೆ, ಹಿಂದಿನ ಯು.ಪಿ.ಎ ಸರಕಾರ ನೀಡಿದ್ದ ಪ್ರವಾಹ ಪರಿಹಾರ ಹಾಗೂ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಪರಿಹಾರದ ವಿಷಯಗಳನ್ನು ನಾಳೆ ವಿವರವಾಗಿ ಚರ್ಚಿಸುವೆ ಎಂದು ಸಿದ್ದರಾಮಯ್ಯ ತಿಳಿಸಿದರು.
0 التعليقات: