Tuesday, 7 December 2021

ಮಂಗಳೂರು ಸಿಟಿ ಬಸ್ ಗಳಲ್ಲಿ ಸ್ವಯಂ ಚಾಲಿತ ಟಿಕೆಟ್ ಯಂತ್ರ ಅಳವಡಿಕೆ, ಕಂಡೆಕ್ಟರ್ ಬೇಕಾಗಿಲ್ಲ!


 ಮಂಗಳೂರು ಸಿಟಿ ಬಸ್ ಗಳಲ್ಲಿ ಸ್ವಯಂ ಚಾಲಿತ ಟಿಕೆಟ್ ಯಂತ್ರ ಅಳವಡಿಕೆ, ಕಂಡೆಕ್ಟರ್ ಬೇಕಾಗಿಲ್ಲ!

ಮಂಗಳೂರು: ಪ್ರಯಾಣಿಕರ ಹಿತದೃಷ್ಟಿಯಿಂದ ಚಲೋ ಕಾರ್ಡ್ ಮೂಲಕ ಈಗಾಗಲೇ ವಿನೂತನ ಪ್ರಯೋಗ ಮಾಡಿರುವ ಸಿಟಿ ಬಸ್ಸುಗಳಲ್ಲಿ ಇನ್ನು ಪ್ರಯಾಣಿಕರಿಗೆ ಸ್ವಯಂ ಚಾಲಿತ ಟಿಕೆಟ್ ಯಂತ್ರವೂ ಲಭ್ಯವಾಗಲಿದೆ. ಚಲೋ ಕಾರ್ಡ್‌ನ್ನು ಹೊಂದಿರುವ ಪ್ರಯಾಣಿಕರು ಬಸ್ಸುಗಳಲ್ಲಿ ಅಳವಡಿಸಲಾಗುವ ಸ್ವಯಂ ಚಾಲಿತ ಟಿಕೆಟ್ ಯಂತ್ರಗಳನ್ನು ಟ್ಯಾಪ್ ಮಾಡಿ ತಾವು ಪ್ರಯಾಣಿಸುವ ಟಿಕೆಟ್ ಪಡೆದುಕೊಂಡು ಪ್ರಯಾಣಿಸಬಹುದು. ಈಗಾಗಲೇ ರೂಟ್ ನಂ. 27ರಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಹಂತ ಹಂತವಾಗಿ ನಗರದ ಎಲ್ಲಾ ರೂಟ್‌ಗಳಲ್ಲಿಯೂ ಇದನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಕೋವಿಡ್ ಸಾಂಕ್ರಾಮಿಕದ ಬಳಿಕ ನಗದು ರಹಿತ ಹಾಗೂ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಚಲೋ ಆ್ಯಪ್ ಬಹಳಷ್ಟು ಸಹಕಾರಿಯಾಗಿದೆ. ಇದೀಗ ಈ ಸ್ವಯಂ ಚಾಲಿತ ಟಿಕೆಟ್ ಯಂತ್ರ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಪ್ರಯೋಜನವಾಗಲಿದೆ ಎಂದರು.

ಈಗಾಗಲೇ ಅಳವಡಿಕೆಯಾಗಿರುವ ರೂಟ್‌ನಲ್ಲಿ ಸುಮಾರು 500ರಷ್ಟು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಬಸ್ಸುಗಳಲ್ಲಿ ಕಂಡೆಕ್ಟರ್ ವ್ಯವಸ್ಥೆ, ಚಿಲ್ಲರೆ ಸಮಸ್ಯೆ ಇಲ್ಲದೆ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಕಾರ್ಡುಗಳಿಗೆ ರೀಚಾರ್ಜ್ ಮಾಡಿಸಲು ನಿರ್ವಾಹಕರಲ್ಲಿ ವಿಚಾರಿಸಬಹುದು ಅಥವಾ ಕೆಲವೊಂದು ರಿಚಾರ್ಜ್ ಸೆಂಟರ್‌ಗಳು ಇದಕ್ಕಾಗಿ ಲಭ್ಯವಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘವು ನಗರದಲ್ಲಿ ಸಂಚರಿಸುವ ಸಿಟಿ ಬಸ್ಸುಗಳಿಗೆ ಸುಮಾರು 41 ವರ್ಷಗಳಿಂದ ಮಕ್ಕಳಿಗೆ ರಿಯಾಯಿತಿ ದರದ ಪಾಸು ವ್ಯವಸ್ಥೆ ಮಾಡುತ್ತಿದೆ. ಒಟ್ಟು 5,14,330 ಮಕ್ಕಳಿಗೆ ಈಗಾಗಲೇ 14,74,50,762.65 ರೂ.ಗಳನ್ನು ವ್ಯಯಿಸಿದೆ. ಸಂಘದ ಮುಂದಿನ ಗುರಿತು ಶೇ. 90ರಷ್ಟು ಪ್ರಯಾಣಿಕರು ಡಿಜಿಟಲೀಕರಣ ಕಾರ್ಡ್ ಹೊಂದುವುದಾಗಿದೆ ಚಲೋ ಕಾರ್ಡ್ ಬಸ್ಸು ಮಾಲಕರ ಜತೆಯಲ್ಲೇ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ಅನುಕೂಲವಾಗಿದೆ. ಚಲೋ ಕಾರ್ಡ್‌ನಲ್ಲಿ ಶೇ. 10ರಷ್ಟು ರಿಯಾಯಿತಿಯನ್ನೂ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು 30, 40 ಹಾಗೂ 80 ದಿನಗಳ ಪಾಸು ಪಡೆದು ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಈ ಕೊಡುಗೆಯು ಹಿಂದಿನಂತೆ ವಿದ್ಯಾರ್ಥಿಯ ವಾಸಸ್ಥಳದಿಂದ ಶಾಲಾ ಕಾಲೇಜುವರೆಗೆ ಪ್ರಯಾಣಿಸಲು ಲಭ್ಯವಾಗಲಿದೆ. ಸಾರ್ವಜನಿಕ ಪ್ರಯಾಣಿಕರು ಕಾರ್ಡುಗಳಿಗೆ ತಮಗೆ ಬೇಕಾದಷ್ಟು ಹಣ ಮುಂಚಿತವಾಗಿ ರೀಚಾರ್ಜ್ ಮಾಡಿಸಿಕೊಂಡು ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಪ್ರತಿ ಪ್ರಯಾಣಕ್ಕೆ ಶೇ. 10ರಷ್ಟು ರಿಯಾಯಿತಿ ಸಿಗಲಿದೆ ಎಂದು ಅವರು ಹೇಳಿದರು.

ಚಲೋ ಕಾರ್ಡ್ ಭೌತಿಕ ಸಂಪರ್ಕ ರಹಿತ ಟ್ಯಾಪ್- ಪಾವತಿ ಕಾರ್ಡ್ ಆಗಿದ್ದು, ಭಾರತದ ಅತ್ಯಂತ ಯಶಸ್ವಿ ಪ್ರಯಾಣ ಕಾರ್ಡ್ ಆಗಿದೆ. ಇದು ದೇಶದ 33 ನಗರಗಳಲ್ಲಿ ಕಾರ್ಯಾಚರಿಸುತ್ತಿದ್ದು, ಚಲೋ ಆ್ಯಪ್ ಲೈವ್ ಟಿಕೆಟಿಂಗ್ 15,000 ಬಸ್ಸುಗಳಲ್ಲಿ ಲಭ್ಯವಿದೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕೃಷ್ಣ ಪುತ್ರನ್, ಉಪಾಧ್ಯಕ್ಷ ಗಣೇಶ್ ಎನ್. ಶೆಟ್ಟಿ, ಕೋಶಾಧಿಕಾರಿ ಸತ್ಯರಾಜ್ ಶೆಟ್ಟಿ, ಜತೆ ಕಾರ್ಯದರ್ಶಿ ರಾಜ್ ಕುಮಾರ್, ಮಾಜಿ ಅಧ್ಯಕ್ಷ ಜಯರಾಮ್ ಶೇಖ, ನೆಲ್ಸನ್ ಪಿರೇರಾ, ದಿಲ್‌ರಾಜ್ ಆಳ್ವ, ಚಲೋ ಕಂಪನಿಯ ಅಮೃತ್, ನಿತೇಶ್ ಜೈನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಶೇ. 60 ರಿಯಾಯಿತಿ ದರದ ಪಾಸ್‌

ಕಳೆದ ಎರಡು ವರ್ಷದ ಹಿಂದೆ ಚಲೋ ಕಂಪನಿಯ ಸಹಯೋಗದೊಂದಿಗೆ ಸಿಟಿ ಬಸ್ಸುಗಳಲ್ಲಿ ನಗದು ರಹಿತ ಡಿಜಿಟಲೀಕರಣ ಆರಂಭಗೊಂಡಿತ್ತು. ಶೇ. 10ರಷ್ಟು ಪ್ರಯಾಣಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಿಗೆ ನಗದು ರಹಿತ ಡಿಜಿಟಲೀಕರಣ ಅವಿಷ್ಕಾರದೊಂದಿಗೆ ಶೇ. 60ರಷ್ಟು ರಿಯಾಯಿತಿ ದರದಲ್ಲಿ ಚಲೋ ಕಾರ್ಡನ್ನು ಒದಗಿಸಲಾಗುವುದು.


SHARE THIS

Author:

0 التعليقات: