Friday, 17 December 2021

ಮತಾಂತರ ನಿಷೇಧ ಕಾಯಿದೆ ಹಿಂದೆ ಜನರ ಹಿತ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ


ಮತಾಂತರ ನಿಷೇಧ ಕಾಯಿದೆ ಹಿಂದೆ ಜನರ ಹಿತ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ:  ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ಹಿಂದೆ ಜನರ ಹಿತ ಇಲ್ಲ. ದೇಶದ ಕೋಮುಸೌಹಾರ್ದ ಹಾಳುಗೆಡಹುದೇ ಇದರ ದುರುದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಮತಾಂತರ ನಿಷೇಧ ಕಾಯಿದೆ ಜಾರಿ ವಿರೋಧಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಬಲಾತ್ಕಾರದ ಮತಾಂತರ‌ ಈಗಲೂ ಶಿಕ್ಷಾರ್ಹ ಅಪರಾಧವಾಗಿರುವಾಗ ಹೊಸ ಕಾಯ್ದೆಯನ್ನು ರಚಿಸುವುದು ಯಾವ ಉದ್ದೇಶಕ್ಕೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರ ವಿರುದ್ಧ ಇತರರನ್ನು ಎತ್ತಿಕಟ್ಟುವ ದುರುದ್ದೇಶದಿಂದಲೇ ಬಿಜೆಪಿ ಸರಕಾರ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ  ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಜಾತಿ-ಧರ್ಮದ ಭೇದವಿಲ್ಲದೆ ಕ್ರಿಶ್ಚಿಯನರು ಸೇರಿದಂತೆ ಎಲ್ಲ ಸಮುದಾಯಗಳ ಜೊತೆಗಿರುತ್ತದೆ. ಯಾವ ಸಮುದಾಯದವರಿಗೂ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದರು.

ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಛೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಆಚರಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಕಾಯಿದೆ ತರುವುದು ಸಂವಿಧಾನಬಾಹಿರ ಎಂದು ತಿಳಿಸಿದರು. 

ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಅಂತಹ ನಡೆಯನ್ನು ನಾವು ಸದನದ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ ಎಂದು ಹೇಳಿದರು. 

ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅವರು ನಡೆಸುವ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಒಂದು ಸಮುದಾಯದವರು ಮಾತ್ರ ಹೋಗುವುದಿಲ್ಲ. ಹೋಗುವ ಎಲ್ಲರೂ ಮತಾಂತರ ಆಗಿಲ್ಲ. ಅದಕ್ಕಾಗಿ ಬಲವಂತವೂ ನಡೆಯುತ್ತಿಲ್ಲ ಎಂದು ತಿಳಿಸಿದರು. 


SHARE THIS

Author:

0 التعليقات: