ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಪಾರಂಪರಿಕ ಮಸೀದಿಗಳಿಗೆ ತೊಂದರೆಯಾಗುವುದಿಲ್ಲ: ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ
ಹೊಸದಿಲ್ಲಿ: ಸೆಂಟ್ರಲ್ ವಿಸ್ಟಾ ಯೋಜನೆಯಿಂದಾಗಿ ಈ ಹಂತದಲ್ಲಿ ಲುಟ್ಯೆನ್ಸ್ ಪ್ರದೇಶದಲ್ಲಿರುವ ಪಾರಂಪರಿಕ ಮಸೀದಿಗಳ ಕಟ್ಟಡಗಳು ಬಾಧಿತವಾಗುವುದಿಲ್ಲ ಎಂದು ದಿಲ್ಲಿ ಹೈಕೋರ್ಟಿಗೆ ಕೇಂದ್ರ ಸರಕಾರ ಬುಧವಾರ ತಿಳಿಸಿದೆ. ಮಸೀದಿ ಕಟ್ಟಡಗಳನ್ನು ರಕ್ಷಿಸಬೇಕೆಂದು ಕೋರಿ ದಿಲ್ಲಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಲು ಸಮಯಾವಕಾಶವನ್ನೂ ಕೇಂದ್ರ ಕೋರಿದೆ ಎಂದು indianexpress.com ವರದಿ ಮಾಡಿದೆ.
ಈ ಪ್ರದೇಶದಲ್ಲಿರುವ ಆರು ಧಾರ್ಮಿಕ ಸ್ವತ್ತುಗಳಲ್ಲಿ ಐದು ಮಸೀದಿಗಳು ಸೇರಿದ್ದು ಇವುಗಳು 100 ವರ್ಷಕ್ಕೂ ಹಳೆಯದಾಗಿವೆ ಎಂದು ದಿಲ್ಲಿ ವಕ್ಫ್ ಮಂಡಳಿ ತನ್ನ ಅರ್ಜಿಯಲ್ಲಿ ಹೇಳಿತ್ತು.
"ಸದ್ಯ ಈ ಕಟ್ಟಡಗಳಿಗೆ ಏನೂ ಆಗುವುದಿಲ್ಲ. ಇದೊಂದು ದೀರ್ಘ ಯೋಜನೆಯಾಗಿದೆ ಹಾಗೂ ನಾವು ಅದರ ಹತ್ತಿರ ಇನ್ನೂ ಬಂದಿಲ್ಲ,'' ಎಂದು ಜಸ್ಟಿಸ್ ಸಂಜೀವ್ ಸಚದೇವಾ ಅವರ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಸಾಲಿಸಿಟರ್ ಜನರಲ್ ಅವರ ಮೌಖಿಕ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ದಿಲ್ಲಿ ವಕ್ಫ್ ಮಂಡಳಿ ಪರ ವಕೀಲರಾದ ಸಂಜಯ್ ಘೋಷ್ ಹೇಳಿದಾಗ ಇದಕ್ಕೆ ತುಷಾರ್ ಮೆಹ್ತಾ ಆಕ್ಷೇಪಿಸಿದರು.
ಮುಂದಿನ ವಿಚಾರಣೆಯ ದಿನಾಂಕವನ್ನು ಜನವರಿ 20ಕ್ಕೆ ನಿಗದಿಪಡಿಸಲಾಗಿದೆ.
ಸೆಂಟ್ರಲ್ ವಿಸ್ಟಾ ಯೋಜನೆ ಜಾರಿ ವೇಳೆ ಐತಿಹಾಸಿಕ ಮಹತ್ವದ ಧಾರ್ಮಿಕ ಸ್ಥಳಗಳನ್ನು ಸಂರಕ್ಷಿಸಬೇಕೆಂದು ವಕ್ಫ್ ಮಂಡಳಿ ತನ್ನ ಅರ್ಜಿಯಲ್ಲಿ ಕೋರಿತ್ತು. ತಾನು ಈ ಕುರಿತು ಎಲ್ಲಾ ಪ್ರಾಧಿಕಾರಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಆಶ್ವಾಸನೆ ಯಾ ಸ್ಪಷ್ಟೀಕರಣ ದೊರೆಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ಕದ ತಟ್ಟಿರುವುದಾಗಿಯೂ ಅದು ತಿಳಿಸಿದೆ.
ಝಬ್ತಾ ಗಂಜ್ ಮಸೀದಿ, ಜಮಾ ಮಸ್ಜಿದ್ ಹೊಸದಿಲ್ಲಿ, ಮಸ್ಜಿದ್ ಸುನೇಹ್ರಿ ಬಾಘ್, ಮಝರ್ ಸುನೇಹ್ರಿ ಬಾಘ್, ಮಸ್ಜಿದ್ ಕೃಷಿ ಭವನ್ ಹಾಗೂ ಮಸ್ಜಿದ್ ವೈಸ್ ಪ್ರೆಸಿಡೆಂಟ್ಸ್ ಹೌಸ್ ಇವುಗಳ ರಕ್ಷಣೆಗೆ ಮಂಡಳಿ ಕೋರಿದೆ.
0 التعليقات: