Friday, 17 December 2021

ಇಥಿಯೋಪಿಯಾದಲ್ಲಿ ಗಂಭೀರ ಮಾನವ ಹಕ್ಕು ಉಲ್ಲಂಘನೆ:‌ ವಿಶ್ವಸಂಸ್ಥೆ ಕಳವಳ


 ಇಥಿಯೋಪಿಯಾದಲ್ಲಿ ಗಂಭೀರ ಮಾನವ ಹಕ್ಕು ಉಲ್ಲಂಘನೆ:‌ ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ: ಇಥಿಯೋಪಿಯಾದಲ್ಲಿ ಕಳೆದ 13 ತಿಂಗಳಿಂದ ಮುಂದುವರಿದಿರುವ ಅಮಾನುಷ ಸಂಘರ್ಷದಲ್ಲಿ ಭಾಗಿಯಾದ ಎಲ್ಲಾ ಪಡೆಗಳೂ ಗಂಭೀರ ಮಾನವ ಹಕ್ಕು ಉಲ್ಲಂಘನೆ ಎಸಗಿರುವ ಬಗ್ಗೆ ತನಗೆ ನಿರಂತರ ವಿಶ್ವಾಸಾರ್ಹ ವರದಿ ಲಭಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಶುಕ್ರವಾರ ವರ್ಚುವಲ್ ವೇದಿಕೆಯಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಅಧಿವೇಶನದಲ್ಲಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ನದಾ ಅಲ್-ನಶಿಫ್, ಇಥಿಯೋಪಿಯಾದಲ್ಲಿ ತಾರತಮ್ಯ , ದ್ವೇಷ ಮತ್ತು ಹಿಂಸಾಚಾರ ಹೆಚ್ಚಾಗುವ ಅಪಾಯ ಗರಿಷ್ಟ ಮಟ್ಟಕ್ಕೇರಿದೆ. ಇದರಿಂದ ಇಥಿಯೋಪಿಯಾದ ಜನತೆಗೆ ಮಾತ್ರವಲ್ಲ, ಈ ವಲಯಾದ್ಯಂತದ ಜನರ ಜೀವನದ ಮೇಲೆ ಹಿಂಸಾಚಾರದ ತೀವ್ರ ಪರಿಣಾಮ ಉಂಟಾಗಬಹುದು ಎಂದರು.

2020ರ ನವೆಂಬರ್‌ನಿಂದ ಇಥಿಯೋಪಿಯಾದ ಫೆಡರಲ್ ಸರಕಾರದ ಪಡೆಗಳು ಹಾಗೂ ಉತ್ತರ ವಲಯದ ಟಿಗ್ರೆಯಲ್ಲಿನ ಸಶಸ್ತ್ರ ಹೋರಾಟಗಾರರ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ ವರದಿಯಾಗಿರುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ತನಿಖೆಗೆ ಅಂತರಾಷ್ಟ್ರೀಯ ತಂಡ ರವಾನಿಸಬೇಕು ಎಂದು ಯುರೋಪಿಯನ್ ಯೂನಿಯನ್ ಆಗ್ರಹಿಸಿದೆ. ಇಥಿಯೋಪಿಯಾಕ್ಕೆ ಸಂಬಂಧಿಸಿ ಅಂತರಾಷ್ಟ್ರೀಯ ಮಾನವಹಕ್ಕು ತಜ್ಞರ ಆಯೋಗ ರಚಿಸುವಂತೆ ಸಮಿತಿಯನ್ನು ಆಗ್ರಹಿಸುವ ಕರಡು ನಿರ್ಣಯವನ್ನು ಮಂಡಿಸಲಾಗುವುದು. ಮಾನವಹಕ್ಕು ಉಲ್ಲಂಘನೆ ಆರೋಪದ ಸತ್ಯಾಂಶ ಕಂಡುಕೊಳ್ಳಲು ಅಗತ್ಯವಿರುವ ಪುರಾವೆ, ಮಾಹಿತಿ ಸಂಗ್ರಹಿಸಿ, ಜವಾಬ್ದಾರರನ್ನು ಗುರುತಿಸುವುದು ಮೂವರು ಸದಸ್ಯರ ಸಮಿತಿಯ ಕಾರ್ಯವಾಗಲಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ.

ವಿಶೇಷ ಅಧಿವೇಶನದಲ್ಲಿ ಕರಡು ಮಸೂದೆ ಮಂಡಿಸುವ ನಿರ್ಧಾರವನ್ನು ಟೀಕಿಸಿರುವ ಇಥಿಯೋಪಿಯಾ ಸರಕಾರ, ಈ ನಿರ್ಣಯದ ವಿರುದ್ಧ ಮತ ಹಾಕುವಂತೆ ಸದಸ್ಯ ದೇಶಗಳನ್ನು ಒತ್ತಾಯಿಸಿದೆ. ಮಾನವ ಹಕ್ಕು ಸಮಿತಿಯನ್ನು ಹೈಜಾಕ್ ಮಾಡಲಾಗಿದ್ದು ಇದನ್ನು ರಾಜಕೀಯ ಒತ್ತಡ ಹೇರುವ ಸಾಧನವಾಗಿ ಬಳಸಲಾಗುತ್ತಿದೆ ಎಂದು ಟೀಕಿಸಿರುವ ಇಥಿಯೋಪಿಯಾ ರಾಯಭಾರಿ ಝೆಂಬೆ ಕೆಬೆಡೆ, ಸಂಕುಚಿತ ಹಿತಾಸಕ್ತಿಯ ನಿರ್ಣಯದ ವಿರುದ್ಧ ನಿಲ್ಲುವಂತೆ ಮತ್ತು ಮಾನವ ಹಕ್ಕುಗಳನ್ನು ರಾಜಕೀಯಗೊಳಿಸುವುದನ್ನು ತಿರಸ್ಕರಿಸುವಂತೆ ಸದಸ್ಯ ದೇಶಗಳಿಗೆ ಮನವಿ ಮಾಡಿದ್ದಾರೆ.


SHARE THIS

Author:

0 التعليقات: