Sunday, 5 December 2021

ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


 ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ಜನಬಲ ಇಲ್ಲದಿರುವ ಕಾರಣ ಹಣದ ಮುಖಾಂತರವೇ ಚುನಾವಣೆ ಗೆಲ್ಲಬೇಕೆಂದು ಹುನ್ನಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಆರೋಪಿಸಿದ್ದಾರೆ.

ರವಿವಾರ ಇಲ್ಲಿನ ಆನೇಕಲ್‍ನ ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಣವಿರುವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ, ಹಣ ಖರ್ಚು ಮಾಡಿ, ಜೊತೆಗೆ ಪಕ್ಷಕ್ಕೂ ನೀಡಿ, ಯಾವುದೇ ಮಾರ್ಗ ಅನುಸರಿಸಿ ಚುನಾವಣೆ ಗೆಲ್ಲಬೇಕೆನ್ನುವ ಅವರ ಚಿಂತೆನೆ ಅತ್ಯಂತ ಕೀಳು ಮಟ್ಟದ್ದಾಗಿದ್ದು, ಕಾಂಗ್ರೆಸ್‍ನ ನೈತಿಕತೆ ಕೆಳಮಟ್ಟಕ್ಕೆ ಇಳಿದಿರುವುದು ಬಹಳ ಸ್ಪಷ್ಟವಾಗಿದೆ. ಅನೈತಿಕವಾಗಿ ಹಣ ಖರ್ಚು ಮಾಡಿ ಗೆಲ್ಲಲು ಬಯಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಸರಿಯಾದ ಜಾಗವನ್ನು ತೋರಿಸಬೇಕು ಎಂದು ತಿಳಿಸಿದರು. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಯಾವಾಗಲೂ ಹಣಬಲ ಹಾಗೂ ತೊಳ್ಬಲದಿಂದ ಗೆಲ್ಲುತ್ತಾರೆಂದು ದೂರುತ್ತಾರೆ. ಆದರೆ, ಈ ಕೆಲಸವನ್ನು ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣೆವರೆಗೂ ಹಣ ಚೆಲ್ಲುತ್ತಿರುವ ನಿಮಗೆ ಯಾವ ನೈತಿಕತೆ ಇದೆ? ತಾವು ಅಧಿಕಾರದಲ್ಲಿದ್ದಾಗ ಗ್ರಾಮ ಪಂಚಾಯತ್ ಗಳ ಕಡೆ ತಿರುಗಿ ನೋಡಲಿಲ್ಲ. 2017ರ ಚುನಾವಣೆಗೆ 3 ತಿಂಗಳು ಇದ್ದ ಸಂದರ್ಭದಲ್ಲಿ ಲಕ್ಷ ಮನೆಗಳನ್ನು ನೀಡುವುದಾಗಿ ಹೇಳಿದಿರಿ, ಆದರೆ ಅದು ಘೋಷಣೆಯಾಗಿಯೇ ಉಳಿಯಿತು ಎಂದು ಟೀಕಿಸಿದರು. 

ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ ಎಂದು ಅವರಿಗೆ ಮುಂಚೆಯೇ ತಿಳಿದ್ದಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಲಕ್ಷ ಮನೆಗಳನ್ನು ನಿರ್ಮಾಣಕ್ಕೆ ಹಣ ಒದಗಿಸಿತು. ನಮ್ಮ ಸರಕಾರ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಂಡಿದೆ. ಸದರಿ ಮನೆಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಕಲ್ಪ: ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ಸರಕಾರ ಹೊಂದಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾ.ಪಂ.ಗಳ ಅಭಿವೃದ್ಧಿ ಯಾದರೆ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ಈ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ಸರಕಾರದ ಗುರಿಯಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿದ್ದರೂ ನಗರದ ವಾರ್ಡ್‍ಗಳಲ್ಲಿ ಆಗುವ ಅಭಿವೃದ್ಧಿ ನಮ್ಮ ಗ್ರಾಮಗಳಲ್ಲಿ ಆಗುತ್ತದೆಯೇ ಎಂಬ ಚಿಂತೆ ಬೇಡ, ಆ ಚಿಂತೆ ದೂರ ಮಾಡಲು ನಾನಿಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. 

ಬೆಂಗಳೂರಿನಲ್ಲಿ ಆಗಿರುವ ಔದ್ಯೋಗೀಕರಣ, ಅದರ ಮುಖಾಂತರ ಬರುವ ತೆರಿಗೆ ಹಣ ಸಂಪೂರ್ಣವಾಗಿ  ಗ್ರಾಮ ಪಂಚಾಯಿತಿಗಳಿಗೆ ವಿನಿಯೋಗ ಆಗಬೇಕು. ಗ್ರಾಮೀಣ ಜನರ ಪರವಾದ ನಿರ್ಧಾರಗಳು ಸರ್ಕಾರದ್ದಾಗಿರುತ್ತದೆ. ಆ.15ರಂದು ಘೋಷಣೆ ಮಾಡಿದ ಅಮೃತ ಯೋಜನೆಗಳಲ್ಲಿ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಮಹತ್ವದ್ದಾಗಿದೆ. 750 ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳು, ಶಾಲಾ ಕಟ್ಟಡಗಳು, ಸೌರಶಕ್ತಿ ದೀಪಗಳ ನಿರ್ಮಾಣ ಮಾ.30 ರೊಳಗೆ ಪೂರ್ಣಗೊಳಿಸಿದರೆ, ಹೆಚ್ಚುವರಿ 25 ಲಕ್ಷ ನೀಡುವ ವಿನೂತನ ಯೋಜನೆ ಇದಾಗಿದೆ.

ಮುಂದಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಎಲ್ಲ ಗ್ರಾ.ಪಂ.ಗಳಿಗೆ ವಿಸ್ತರಿಸುವ ಚಿಂತನೆ ಇದೆ. ಅಮೃತ ವಸತಿ ಯೋಜನೆಯಡಿ ಗ್ರಾಮಸ್ತರಿಗೆ ನಿವೇಶನ ಹಾಗೂ ಮನೆಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ. ಗ್ರಾಮಗಳಲ್ಲಿರುವ ಸ್ರೀ ಶಕ್ತಿ ಸಂಘಗಳು, 75ಸಾವಿರ ಎಸ್ಸಿ-ಎಸ್ಟಿ, ಒಬಿಸಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜನರ ಸುತ್ತ ಅಭಿವೃದ್ಧಿ: ನಮ್ಮ ಸರಕಾರದ ಧ್ಯೇಯ ಜನರ ಸುತ್ತ ಅಭಿವೃದ್ಧಿ ಆಗಬೇಕು, ಗ್ರಾಮ ಹಾಗೂ ಗ್ರಾಮೀಣ ಜನರ ಅಭಿವೃದ್ಧಿ ಸರಕಾರದ ಗುರಿಯಾಗಿದೆ. ಬಿಜೆಪಿಯ ಗೋಪಿನಾಥ್ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಕೋರಿದರು.

ಆನೇಕಲ್ ವಿಷನ್: ಆನೇಕಲ್ ತಾಲೂಕಿನಲ್ಲಿ ಬಂಡವಾಳ ಹೂಡಲು ಅನೇಕರು ಮುಂದೆ ಬರುತ್ತಿದ್ದಾರೆ, ಬೆಂಗಳೂರು ವಿಷನ್ ನಂತೆ ಆನೇಕಲ್ ನ ಸಮಗ್ರ ಅಭಿವೃದ್ಧಿಗೆ ಆನೇಕಲ್ ವಿಷನ್ ನಮ್ಮ ಸರಕಾರ ಮಾಡಲಿದೆ. ನಾರಾಯಣ ಸ್ವಾಮಿಯವರು ಈ ಭಾಗದ ಅಭಿವೃದ್ಧಿಯಲ್ಲಿ ಬದ್ಧತೆ ತೋರುವ ಧೀಮಂತ ನಾಯಕರಾಗಿದ್ದಾರೆ. ಗೋಪಿನಾಥ್, ನಾರಾಯಣಸ್ವಾಮಿಯವರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಬಲತುಂಬಬೇಕು ಎಂದು ಕರೆ ನೀಡಿದರು. 

ಸಮಾವೇಶದಲ್ಲಿ ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ ರೆಡ್ಡಿ, ಕೃಷ್ಣಪ್ಪ, ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


SHARE THIS

Author:

0 التعليقات: