Tuesday, 14 December 2021

ರಾಜ್ಯದಲ್ಲಿ ಅಲ್ಪಸಂಖ್ಯಾತರು ಇರಬೇಕೇ? ಅಥವಾ ಬೇಡವೇ?: ಸರಕಾರಕ್ಕೆ ಶಿವಲಿಂಗೇಗೌಡ ಪ್ರಶ್ನೆ

ki
 ರಾಜ್ಯದಲ್ಲಿ ಅಲ್ಪಸಂಖ್ಯಾತರು ಇರಬೇಕೇ? ಅಥವಾ ಬೇಡವೇ?: ಸರಕಾರಕ್ಕೆ ಶಿವಲಿಂಗೇಗೌಡ ಪ್ರಶ್ನೆ

ಬೆಳಗಾವಿ: ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಇರಬೇಕೇ? ಅಥವಾ ಬೇಡವೇ? ಎಂದು ಜೆಡಿಎಸ್‍ನ ಹಿರಿಯ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಇಂದಿಲ್ಲಿ ಆಡಳಿತ ಪಕ್ಷವನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕೆ.ಎಸ್.ಲಿಂಗೇಶ್ ಕೇಳಿದ ಪ್ರಶ್ನೆಗೆ ಸರಕಾರದ ಉತ್ತರದಿಂದ ತೃಪ್ತರಾಗದೇ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ನಿಗಮದಡಿಯಲ್ಲಿ ಆ ಸಮುದಾಯದ ಅಭಿವೃದ್ಧಿಗೆ ಹಣ ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರಕಾರ ಆ ನಿಗಮಕ್ಕೆ ಒಂದು ಬಿಡಿಗಾಸು ಹಣ ನೀಡಿಲ್ಲ. ಈ ಹಿಂದೆ ಸಿದ್ದರಾಮಯ್ಯ 800 ಕೋಟಿ ರೂ. ಹಾಗೂ ಕುಮಾರಸ್ವಾಮಿ 400 ಕೋಟಿ ರೂ.ಗಳನ್ನು ನೀಡಿದ್ದರು ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಹಾನಗರ ಪಾಲಿಕೆಗಳ ಮಾದರಿಯಲ್ಲೇ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯ ಅಭಿವೃದ್ಧಿಗೆ ಸರಕಾರ ಹಣ ನೀಡಬೇಕು. ಅಲ್ಲದೆ ಅವರು ನಾಗರಿಕರೆಂದು ಸರಕಾರ ಪರಿಗಣಿಸಬೇಕು ಎಂದು ಶಿವಲಿಂಗೇಗೌಡ ಆಗ್ರಹಿಸಿದರು.

ಆರಂಭಕ್ಕೆ ಮಾತನಾಡಿದ ಸದಸ್ಯ ಲಿಂಗೇಶ್, ನನ್ನ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್, ಕ್ರೈಸ್ತ ಹಾಗೂ ಜೈನ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ವಾಸ ಮಾಡುವ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಲ್ಲ. ಹೀಗಾಗಿ ಸರಕಾರ ಸೂಕ್ತ ಹಣ ನೀಡಿ ಮೂಲ ಸೌಲಭ್ಯಗಳ ಅಭಿವೃದ್ಧಿ ಆಸ್ಥೆ ವಹಿಸಬೇಕು. ಜೊತೆಗೆ ಮದರಸಗಳಲ್ಲಿ ಆಧುನಿಕ ಶಿಕ್ಷಣ ನೀಡುವ ಮೂಲಕ ಆ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದು ಕೋರಿದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, 2021-22ನೆ ಸಾಲಿನಲ್ಲಿ ಬೇಲೂರು ಕ್ಷೇತ್ರದಲ್ಲಿನ ಅಲ್ಪಸಂಖ್ಯಾತ ಜನವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ಹಂಚಿಕೆ ಮಾಡಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಸದಸ್ಯರ ಮನವಿ ಪರಿಗಣಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.


SHARE THIS

Author:

0 التعليقات: