Friday, 10 December 2021

ಮತಾಂತರ ನಿಷೇಧ: ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಮಂಡನೆ ಸಾಧ್ಯತೆ

 ಮತಾಂತರ ನಿಷೇಧ: ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಮಂಡನೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ `ಮತಾಂತರ ನಿಷೇಧ' ತಿದ್ದುಪಡಿ ಕಾಯ್ದೆ ಜಾರಿ ಸಂಬಂಧ ಕ್ರೈಸ್ತ ಸಮುದಾಯ ಸೇರಿದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಕಾಯ್ದೆ ಜಾರಿಗೆ ಒತ್ತಡ ಹೇರುತ್ತಿದ್ದು, ಡಿ.13ರಿಂದ ಆರಂಭಗೊಳ್ಳುತ್ತಿರುವ ಬೆಳಗಾವಿ ಅಧಿವೇಶನದಲ್ಲಿ `ಮತಾಂತರ ನಿಷೇಧ ತಿದ್ದುಪಡಿ ಮಸೂದೆ' ಮಂಡನೆಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.

ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್, `ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧಕ್ಕೆ ಕಾಯ್ದೆ ಅವಶ್ಯಕತೆ ಇದೆ. ಮತಾಂತರ ವಿರುದ್ಧ ಹಲವು ಮಠಾಧಿಪತಿಗಳು ಧ್ವನಿ ಎತ್ತುತ್ತಿದ್ದು, ಬಡಜನರಿಗೆ ಆಸೆ-ಆಮಿಷವೊಡ್ಡಲಾಗುತ್ತಿದೆ. ಅಲ್ಲದೆ, ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆಯೇ ರಾಜ್ಯ ಸರಕಾರ `ಮತಾಂತರ ನಿಷೇಧ ತಿದ್ದುಪಡಿ ಮಸೂದೆಯ ಕರಡನ್ನು ಈಗಾಗಲೇ ಸಿದ್ಧಪಡಿಸಿದ್ದು, ಎರಡೆರೆಡು ಬಾರಿ ಕರಡನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕ ಮಂಡಿಸಲು ತಯಾರಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಬಲವಂತರ ಮತಾಂತರ ನಿಷೇಧಕ್ಕೆ ಕಾಯ್ದೆ ಜಾರಿಯಲಿದೆ. ಇದೀಗ ಸರಕಾರ ಜಾರಿಗೆ ತರಲು ಮುಂದಾಗಿರುವ ಕಾನೂನಿನಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದ್ದು, ಮತಾಂತರ ಮಾಡವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಂಶವು ವಿಧೇಯಕದಲ್ಲಿದೆ. ಸರಕಾರ ಮಂಡಿಸಲಿರುವ ಈ ಮತಾಂತರ ನಿಷೇಧ ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸುವ ಸಾಧ್ಯತೆಗಳಿಗೆ ಎನ್ನಲಾಗಿದೆ.

ಒಂದು ವೇಳೆ ವ್ಯಕ್ತಿ ಸ್ವ ಇಚ್ಛೆಯಿಂದ ಮತಾಂತರವಾದರೆ ಅದು ಸಿಂಧುವಾಗಲು ಮ್ಯಾಜಿಸ್ಟ್ರೇಟ್‍ಗೆ ಮುಂದೆಯೇ ಮತಾಂತರ ಉದ್ದೇಶ ತಿಳಿಸಬೇಕು. ಹಾಗೆಯೇ ಮ್ಯಾಜಿಸ್ಟ್ರೇಟ್ ಅವರು ಮತಾಂತರ ವಾಸ್ತವ ಉದ್ದೇಶವನ್ನ ಅರಿಯಲು ಪೊಲೀಸ್ ತನಿಖೆ ನಡೆಸಲು ಅವಕಾಶ ನೀಡುವ ಅಂಶವೂ ವಿಧೇಯಕದಲ್ಲಿದೆ. ಬಲವಂತದ ಮತಾಂತರ ಆಗಿಲ್ಲವೆಂಬ ಅಂಶವನ್ನು ಸಾಬೀತುಪಡಿಸಬೇಕು. ಒಂದು ವೇಳೆ ಬಲವಂತದ ಮತಾಂತರ ಮಾಡಿದವರಿಗೆ 1 ರಿಂದ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸುವ ಅಂಶವೂ ಈ ವಿಧೇಯಕದಲ್ಲಿ ಅಡಕವಾಗಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧಕ್ಕೆ ಸಂಬಂಧಿಸಿದ `ಹೊಸ ಕಾಯ್ದೆ ಅಗತ್ಯವಿಲ್ಲ. ಒಂದು ವೇಳೆ ಸರಕಾರ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾದರೆ ಕಾಂಗ್ರೆಸ್ ಅದನ್ನು ವಿರೋಧಿಸಿ ಉಭಯ ಸದನಗಳನ್ನು ಹೋರಾಟ ರೂಪಿಸಲಿದೆ' ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಕಟಿಸಿದೆ. ಹೀಗಾಗಿ ಮತಾಂತರ ನಿಷೇಧ ತಿದ್ದುಪಡಿ ಮಸೂದೆ ವಿಧಾನ ಮಂಡಲ ಅಧಿವೇಶನದಲ್ಲಿ ತೀವ್ರ ಗದ್ದಲ-ಕೋಲಾಹಲಕ್ಕೂ ಸಾಕ್ಷಿಯಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ.


SHARE THIS

Author:

0 التعليقات: