Sunday, 19 December 2021

ಬಿಜೆಪಿಗೆ ಅಸ್ಥಿರತೆ ಚಿಂತೆ; ಭದ್ರಕೋಟೆಯಲ್ಲೇ ಬಿರುಕು ತಂದ ತಳಮಳ..

ಬಿಜೆಪಿಗೆ ಅಸ್ಥಿರತೆ ಚಿಂತೆ; ಭದ್ರಕೋಟೆಯಲ್ಲೇ ಬಿರುಕು ತಂದ ತಳಮಳ..

ಕಳೆದ ವಿಧಾನಸಭೆ ಚುನಾವಣೆಯ 'ಒಂದು ಓಟಿಗೆ ಎರಡು ಸರ್ಕಾರಗಳು' ಎಂಬ ಘೊಷಣೆ, ನಂತರ ಡಬಲ್ ಇಂಜಿನ್ ಸರ್ಕಾರವೆಂಬ ಉದ್ಘೋಷವೇ ಕಮಲಪಡೆಗೆ ಮಗ್ಗಲುಮುಳ್ಳಾಗಿ ಕಾಡಲಾರಂಭಿಸಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಅಭಿವೃದ್ಧಿ ವೇಗ ಪಡೆದುಕೊಂಡಿಲ್ಲ.

ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯ, ಸಂವಹನದ ಕೊರತೆ ಆಡಳಿತ ಯಂತ್ರಾಂಗದ ಅಡ್ಡ ಪರಿಣಾಮ ಬೀರುತ್ತಿದೆ. ಇತ್ತ ಕರೊನಾ ತಂದಿಟ್ಟ ಸಂಕಷ್ಟದಿಂದ ಜನರ ನಿರೀಕ್ಷೆ-ಅಪೇಕ್ಷೆ ಏರುಮುಖಿಯಾಗಿವೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ವಿದ್ಯಾನಿಧಿ, ಮಾಸಾಶನ ಹೆಚ್ಚಳ, 'ಅಮೃತ' ಯೋಜನೆಗಳು, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ನೆರವಿನಂತಹ ಜನಪ್ರಿಯ ಕಾರ್ಯಕ್ರಮಗಳು ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ವೃದ್ಧಿಗೆ ನೆರವಾಗಲಿವೆ ಎಂದುಕೊಂಡಿದ್ದೇ ಬಂತು. ಅಷ್ಟರೊಳಗೆ ಬಿಟ್ ಕಾಯಿನ್, ಪರ್ಸೆಂಟೇಜ್ ಹಗರಣಗಳ ಆರೋಪ ಎರಗಿ ಲೆಕ್ಕಾಚಾರ ತಲೆಕೆಳಗು ಮಾಡಿದೆ. ಈ ಬೆಳವಣಿಗೆಗಳ ಒಟ್ಟು ಪರಿಣಾಮ ಬಿಜೆಪಿಯು 'ಅಸ್ಥಿರತೆ' ಬೇಗುದಿ ಅನುಭವಿಸುತ್ತಿದ್ದು, ಇತ್ತೀಚಿನ ಚುನಾವಣೆಗಳ ಫಲಿತಾಂಶ ಪಕ್ಷದ ಸಾಗುತ್ತಿರುವ ದಾರಿಗೆ ಕೈಗನ್ನಡಿ ಎಂದು ಮೂಲಗಳು ತಿಳಿಸಿವೆ. ಸಚಿವರು ಅಧಿಕಾರ ಅನುಭವಿಸುತ್ತಿದ್ದಾರೆ. ಶಾಸಕರು ಹಾಗೂ ಮುಖಂಡರು ಅಧಿಕಾರದ ಬೆನ್ನತ್ತಿದ್ದು, ಅಭಿವೃದ್ಧಿ ಕೆಲಸಗಳು ಜಡಗಟ್ಟಿ, ಸಮಸ್ಯೆಗಳ ಬಾಣಲೆಯಲ್ಲಿ ಜನರು ಬೇಯುತ್ತಿದ್ದಾರೆ. ಹೀಗಾಗಿ ಬಲಿಷ್ಠ ಸಂಘಟನೆ, ಉತ್ಸಾಹಭರಿತ ಕಾರ್ಯಕರ್ತರಿದ್ದರೂ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಮುಖಂಡರೊಬ್ಬರು ಕನಲಿದರು.

ಭದ್ರಕೋಟೆಯಲ್ಲಿ ಬಿರುಕು: ಮೈಸೂರು, ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು, ಹಲವೆಡೆ ಅಲ್ಪಮತಗಳ ಅಂತರದ ಗೆಲುವಿನಿಂದಾಗಿ ಭದ್ರಕೋಟೆಯಲ್ಲಿ ಬಿರುಕು ಬಿಟ್ಟಿದ್ದು, ಈ ಒಡಕಿನ ಲಾಭ ನೇರವಾಗಿ 'ಕೈ' ಪಾಲಾಗಿರುವುದು ನಿಚ್ಚಳವಾಗಿದೆ. ವಸ್ತುಸ್ಥಿತಿ ಅರಿತು ಎಚ್ಚೆತ್ತುಕೊಳ್ಳದಿದ್ದರೆ ಕೇಂದ್ರ- ರಾಜ್ಯದಲ್ಲಿ ನಾವೇ ಅಧಿಕಾರದಲ್ಲಿದ್ದೇವೆ ಎಂಬ ಬೀಗುವಿಕೆ ಅರ್ಥ ಕಳೆದುಕೊಳ್ಳಲಿದೆ. ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿ ಯಲ್ಲಿ ನಡೆದ ಸರಣಿ ಉಪ ಚುನಾವಣೆಗಳ ಗೆಲುವಿನ ಶಕ್ತಿ, ಜನಪ್ರಿಯತೆ ಹಳಿಗೆ ಮತ್ತೆ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಚೈತನ್ಯ ತುಂಬಲು ಕ್ರಮ: ಅಧಿವೇಶನ ಮುಗಿದ ಬಳಿಕ ನಿಗಮ-ಮಂಡಳಿಗಳನ್ನು ಪುನರ್ ರಚಿಸಿ, ಹೊಸಬರಿಗೆ ಆದ್ಯತೆ ನೀಡುವ ಮೂಲಕ ಶಾಸಕರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೂ ಕ್ರಮವಹಿಸಲಿದ್ದು, ಅಧಿಕಾರಿಗಳಿಗೆ ಸಲಹೆ- ಸೂಚನೆ, ಪ್ರಸ್ತಾವನೆಗಳಿಗೆ ಅನುಮೋದನೆ ಕೊಡಿಸುವ ಶಾಸಕರ ಕೋಪಾವೇಶ ಶಮನಕ್ಕೂ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹತ್ವದ ಸಭೆಗಳು: ಪಕ್ಷ ಹಾಗೂ ಸರ್ಕಾರ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸುತ್ತಿರುವ ಹೊತ್ತಲ್ಲಿ ಮಹತ್ವದ ಸಭೆಗಳು ನಿಗದಿಯಾಗಿವೆ. ಹುಬ್ಬಳ್ಳಿಯಲ್ಲಿ ಡಿ.28ರಂದು ಪಕ್ಷದ ರಾಜ್ಯ ಪದಾಧಿಕಾರಿಗಳ ಹಾಗೂ ಡಿ.29ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ. ಸಿಎಂ ಬೊಮ್ಮಾಯಿ ತವರು ಜಿಲ್ಲೆ ಪ್ರವಾಸ, ಹೊಸ ಅಭಿವೃದ್ಧಿ ಯೋಜನೆಗಳ ಕೊಡುಗೆ ನೀಡುವಲ್ಲಿ ಮುಂದಿದ್ದಾರೆ. ಇದನ್ನೇ ಸಚಿವ ಸಂಪುಟದ ಬಹುತೇಕ ಸಚಿವರು ಮೇಲ್ಪಂಕ್ತಿ ಮಾಡಿಕೊಂಡಿದ್ದರು. ರಾಜ್ಯಕ್ಕೆ ಸಚಿವರು ಎಂಬುದನ್ನು ಮರೆತು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಎಂಬ ಮುನಿಸು ಸ್ಪೋಟಿಸುವ ಸಾಧ್ಯತೆಗಳಿವೆ.SHARE THIS

Author:

0 التعليقات: