Wednesday, 15 December 2021

ಕೊರೋನ; ಅಮೆರಿಕದಲ್ಲಿ ಮೃತರ ಸಂಖ್ಯೆ 8 ಲಕ್ಷಕ್ಕೆ ಏರಿಕೆ


ಕೊರೋನ; ಅಮೆರಿಕದಲ್ಲಿ ಮೃತರ ಸಂಖ್ಯೆ 8 ಲಕ್ಷಕ್ಕೆ ಏರಿಕೆ


ನ್ಯೂಯಾರ್ಕ್: ಅಮೆರಿಕದಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 8 ಲಕ್ಷದ ಗಡಿ ತಲುಪಿದ್ದು , ಕೊರೋನ ಸೋಂಕಿನಿಂದ ಅತ್ಯಧಿಕ ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿವಿ ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ. ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರಲ್ಲಿ ಲಸಿಕೆ ಪಡೆಯದವರ ಪ್ರಮಾಣ ಹೆಚ್ಚು ಎಂದು ವರದಿ ಹೇಳಿದೆ. ‌

ವಿಶ್ವದ ಜನಸಂಖ್ಯೆಯ ಸುಮಾರು 4% ಜನ ಅಮೆರಿಕದಲ್ಲಿದ್ದಾರೆ. ಆದರೆ ಕೊರೋನ ಸೋಂಕಿನಿಂದ ಜಾಗತಿಕವಾಗಿ ದಾಖಲಾದ 5.3 ಮಿಲಿಯನ್ ಮರಣ ಪ್ರಕರಣಗಳ ಸುಮಾರು 15% ಮರಣ ಅಮೆರಿಕದಲ್ಲಿ ಸಂಭವಿಸಿದೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ಹೇಳಿದೆ. ಕೊರೋನ ಸೋಂಕಿಗೆ ಸಂಬಂಧಿಸಿ 8 ಲಕ್ಷ ಅಮೆರಿಕನರ ಸಾವಿನ ದುರಂತ ಮೈಲುಗಲ್ಲಿನ ಗಡಿಯನ್ನು ನಾವಿಂದು ತಲುಪಿದ್ದು ಈ ಸಂದರ್ಭ ಪ್ರತಿಯೊಬ್ಬರನ್ನೂ ಸ್ಮರಿಸುತ್ತಾ ಅವರ ಕುಟುಂಬದವರು ಹಾಗೂ ನಿಕಟ ಬಂಧುಗಳ ಪರವಾಗಿ ಪ್ರಾರ್ಥಿಸುತ್ತೇವೆ . ಇನ್ನೇನು ಚಳಿಗಾಲ ಆರಂಭವಾಗಲಿದ್ದು ಜತೆಗೇ ಹೊಸ ರೂಪಾಂತರಿತ ಸೋಂಕು ದೃಢಪಟ್ಟಿರುವಾಗ, ಸೋಂಕಿನ ವಿರುದ್ಧ ಜತೆಗೂಡಿ ಹೋರಾಡಲು ಸಂಕಲ್ಪ ಮಾಡಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. 

ಡೆಲ್ಟಾ ರೂಪಾಂತರ ಉಲ್ಬಣಗೊಂಡ ಸಮಯದಲ್ಲಿ ಅಮೆರಿಕದಲ್ಲಿ ಲಸಿಕಾಕರಣ ಪ್ರಕ್ರಿಯೆ ವೇಗ ಪಡೆದಿದ್ದು ದೇಶದ ಜನಸಂಖ್ಯೆಯ 60%ಕ್ಕೂ ಅಧಿಕ, ಅಂದರೆ 332 ಮಿಲಿಯನ್ ಜನತೆ ಈಗ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಆದರೆ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಈಗ ಅಮೆರಿಕದ ಉತ್ತರ ರಾಜ್ಯಗಳಲ್ಲಿ ತೀವ್ರ ಚಳಿಯ ಸಮಯವಾದ್ದರಿಂದ ಜನತೆ ಒಳಾಂಗಣ ಪ್ರದೇಶಗಳಲ್ಲೇ ಹೆಚ್ಚಾಗಿ ಗುಂಪು ಸೇರುತ್ತಾರೆ. ಇದು ಸೋಂಕಿನ 5ನೇ ಅಲೆಗೆ ನಾಂದಿ ಹಾಡಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಈಗ ಅಮೆರಿಕದಲ್ಲಿ ದಾಖಲಾಗಿರುವ ಸಕ್ರಿಯ ಪ್ರಕರಣಗಳ ಸುಮಾರು 3%ದಷ್ಟು ಒಮೈಕ್ರಾನ್ ಸೋಂಕು ಪ್ರಕರಣವಾಗಿದ್ದು ಈ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುವ ನಿರೀಕ್ಷೆಯಿದೆ. ಒಮೈಕ್ರಾನ್‌ನಿಂದ ಸೌಮ್ಯ ಪ್ರಮಾಣದ ಅನಾರೋಗ್ಯ ಉಂಟಾಗುತ್ತದೆ ಎಂದು ಆರಂಭಿಕ ಅಂಕಿಅಂಶ ತಿಳಿಸಿದ್ದರೂ, ಅದರ ಪ್ರಸರಣ ಸಾಮರ್ಥ್ಯ ಹೆಚ್ಚಿರುವುದು ಮತ್ತು ಪ್ರತಿರೋಧ ಶಕ್ತಿಯನ್ನು ಮೀರುವ ಸಾಮರ್ಥ್ಯದಿಂದ ಅತ್ಯಧಿಕ ಜನರಿಗೆ ಸೋಂಕು ತಗುಲಬಹುದು. ಆದ್ದರಿಂದ 16 ವರ್ಷ ಮೀರಿದ ಎಲ್ಲರೂ ಬೂಸ್ಟರ್ ಡೋಸ್ ಪಡೆದು ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ಆಗ್ರಹಿಸಿದ್ದಾರೆ. ಅಮೆರಿಕದಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ಸಾವಿನ ಪ್ರಕರಣ 8 ಲಕ್ಷದ ಗಡಿ ದಾಟಿದ ವರದಿಯ ಬಳಿಕ ಅಮೆರಿಕದ ಸಂಸತ್ತಿನ ಸದಸ್ಯರು ಕ್ಯಾಪಿಟಲ್ ಬಿಲ್ಡಿಂಗ್‌ನ ಮೆಟ್ಟಿಲಿನ ಮೇಲೆ ನಿಂತು 1 ನಿಮಿಷದ ಮೌನ ಆಚರಿಸುವ ಮೂಲಕ ಮೃತರಿಗೆ ಸಂತಾಪ ಸಲ್ಲಿಸಿದರು.


SHARE THIS

Author:

0 التعليقات: