Saturday, 11 December 2021

ಸೇನಾ ಹೆಲಿಕಾಪ್ಟರ್ ದುರಂತ: ಇನ್ನೂ 6 ಮಂದಿಯ ಪಾರ್ಥಿವ ಶರೀರಗಳ ಗುರುತು ಪತ್ತೆ


ಸೇನಾ ಹೆಲಿಕಾಪ್ಟರ್ ದುರಂತ: ಇನ್ನೂ 6 ಮಂದಿಯ ಪಾರ್ಥಿವ ಶರೀರಗಳ ಗುರುತು ಪತ್ತೆ

ಹೊಸದಿಲ್ಲಿ: ತಮಿಳುನಾಡಿನ ಸೂಲೂರಿನಲ್ಲಿ ಬುಧವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಆರು ಮಂದಿಯ ಪಾರ್ಥಿವ ಶರೀರಗಳನ್ನು ಗುರುತಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಇವರಲ್ಲಿ ನಾಲ್ವರು ಭಾರತೀಯ ವಾಯುಪಡೆ ಹಾಗೂ ಇಬ್ಬರು ಭೂಸೇನೆಯ ಸಿಬ್ಬಂದಿಯೆಂದು ಅವು ಹೇಳಿವೆ.

ಜೂನಿಯರ್ ವಾರಂಟ್ ಅಧಿಕಾರಿಗಳಾದ ಪ್ರದೀಪ್ ಅರಕ್ಕಲ್, ರಾಣಾ ಪ್ರತಾಪ್ ದಾಸ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಲ್ಯಾನ್ಸ್ ನಾಯಕ್ ಬಿ. ಸಾಯಿ ತೇಜಾ ಹಾಗೂ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಪಾರ್ಥಿವ ಶರೀರಗಳನ್ನು ಗುರುತಿಸಲಾಗಿದೆ.

ಆದರೆ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯಕ್ ಬಿ. ಸಾಯಿ ತೇಜಾ ಅವರ ಪಾರ್ಥಿವ ಶರೀರವನ್ನು ‘ಸಕಾರಾತ್ಮಕ’ವಾಗಿ ಗುರುತಿಸಲಾಗಿದ್ದು, ಅವುಗಳನ್ನು ಅವರ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆಯೆಂದು ಸೇನಾ ಮೂಲಗಳು ಹೇಳಿವೆ.

ಮೃತದೇಹಗಳನ್ನು ಸಕಾರಾತ್ಮಕವಾಗಿ ಗುರುತಿಸಿದ ಬಳಿಕವಷ್ಟೇ ಅವುಗಳನ್ನು ಬಂಧುಗಳಿಗೆ ಹಸ್ತಾಂತರಿಸಲಾಗುವುದು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ

‘‘ಕುಟುಂಬ ಸದಸ್ಯರ ಭಾವನಾತ್ಮಕ ಸಂವೇದನೆಗಳನ್ನು ಗಮನದಲ್ಲಿರಿಸಿಕೊಂಡು ನಾವು ಗುರುತುಪತ್ತೆ ಪ್ರಕ್ರಿಯೆಯನ್ನು ಮುಂದುವರಿಸಿದ್ದೇವೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ರಕ್ಷಣಾ ಪಡೆಗಳ ವರಿಷ್ಠ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ರಕ್ಷಣಾ ಪಡೆ ವರಿಷ್ಠ ರಕ್ಷಣಾ ಸಲಹೆಗಾರ ಎಲ್.ಎಸ್.ಲಿಡ್ಡರ್ ಅವರ ಮೃತದೇಹಗಳನ್ನು ಸಕಾರಾತ್ಮಕವಾಗಿ ಗುರುತಿಸಲು ಸಾಧ್ಯವಾಗಿದ್ದು, ಶುಕ್ರವಾರ ದಿಲ್ಲಿಯ ಬ್ರಾರ್ ಸ್ಕ್ವಾರ್ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.


 SHARE THIS

Author:

0 التعليقات: