ತಮಿಳುನಾಡು: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರನ್ನು ಹೊತ್ತ ಸೇನಾ ಹೆಲಿಕಾಪ್ಟರ್ ಪತನ
ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಸಹಿತ 14 ಜನರನ್ನು ಹೊತ್ತ ಸೇನಾ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ತಿಳಿಸಿದೆ.
ಅಪಘಾತದ ಸ್ಥಳದಿಂದ ಐದು ಶವಗಳು ಪತ್ತೆಯಾಗಿವೆ ಹಾಗೂ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ವಿವರಗಳು ಇಲ್ಲಿಯವರೆಗೆ ತಿಳಿದುಬಂದಿಲ್ಲ.
ವಿಮಾನದಲ್ಲಿದ್ದ 14 ಮಂದಿಯಲ್ಲಿ ಜನರಲ್ ರಾವತ್ ಅವರ ಪತ್ನಿ, ಅವರ ರಕ್ಷಣಾ ಸಹಾಯಕರು, ಭದ್ರತಾ ಕಮಾಂಡೋಗಳು ಹಾಗೂ ಭಾರತೀಯ ವಾಯುಪಡೆಯ ಸಿಬ್ಬಂದಿ ಸೇರಿದ್ದಾರೆ ಎಂದು ವರದಿಯಾಗಿದೆ.
ಸೂಲೂರಿನ ಸೇನಾ ನೆಲೆಯಿಂದ ಮಿ-ಸಿರೀಸ್ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ನೀಲಗಿರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಇದುವರೆಗೆ ಮೂವರನ್ನು ರಕ್ಷಿಸಲಾಗಿದ್ದು, ರಕ್ಷಿಸಲ್ಪಟ್ಟ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ಗೆ ಕರೆದೊಯ್ಯಲಾಗಿದೆ.
ಮೂಲಗಳ ಪ್ರಕಾರ, ಸಿಡಿಎಸ್ ಬಿಪಿನ್ ರಾವತ್ ಅವರ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಅವರ ಜೊತೆಗೆ ಮಿ-ಸಿರೀಸ್ ಹೆಲಿಕಾಪ್ಟರ್ ನಲ್ಲಿದ್ದರು. ಅದು ತಮಿಳುನಾಡಿನ ಕೊಯಮತ್ತೂರು ಹಾಗೂ ಸೂಲೂರು ನಡುವೆ ಅಪಘಾತಕ್ಕೀಡಾಯಿತು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಗಳ ಪ್ರಕಾರ, ಸಿಡಿಎಸ್ ಬಿಪಿನ್ ರಾವತ್ ಅವರು ಸೂಲೂರಿನ ಭಾರತೀಯ ವಾಯುಪಡೆ ನೆಲೆಯಿಂದ ಕೂನೂರ್ ನ ವೆಲ್ಲಿಂಗ್ಟನ್ಗೆ ತೆರಳುತ್ತಿದ್ದರು.
ಭಾರತೀಯ ಸೇನೆಯ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಬೃಹತ್ ಬೆಂಕಿ ಜ್ವಾಲೆ ಕಂಡುಬಂದಿದ್ದು, ತಕ್ಷಣದ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಸಹಾಯ ಮಾಡುತ್ತಿದ್ದಾರೆ. ಹಲವು ತಂಡಗಳು ಸ್ಥಳದಲ್ಲಿದ್ದು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
0 التعليقات: