ವಿಶ್ವ ಕ್ರಿಕೆಟ್ನ ಹಿರಿಯಜ್ಜಿ ಐಲೀನ್ ಆ್ಯಷ್ 110ನೇ ವಯಸ್ಸಿನಲ್ಲಿ ನಿಧನ
ಲಂಡನ್: ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟ್ ಪಟು ಐಲೀನ್ ಆ್ಯಷ್ ತಮ್ಮ 110 ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ಬಲಗೈ ವೇಗದ ಬೌಲರ್ ಅಗಿದ್ದ ಐಲೀನ್ 1937ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಎರಡನೇ ಜಾಗತಿಕ ಯುದ್ಧದ ಮೊದಲು ಹಾಗೂ ಬಳಿಕ ಇಂಗ್ಲೆಂಡ್ ದೇಶವನ್ನು ಏಳು ಬಾರಿ ಪ್ರತಿನಿಧಿಸಿದ್ದ ಅವರು 1949ರಲ್ಲಿ ನಿವೃತ್ತಿ ಪಡೆದಿದ್ದರು. ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಅವರು 98ನೇ ವಯಸ್ಸಿನವರೆಗೂ ಗಾಲ್ಫ್ ಆಡುತ್ತಿದ್ದರು. 2017ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡ ಜಯ ಗಳಿಸಿದ ಪಂದ್ಯದ ಅರಂಭದಲ್ಲಿ ಗಂಟೆ ಮೊಳಗಿಸುವ ಗೌರವವನ್ನು ಅವರು ಪಡೆದಿದ್ದರು.
ಇಸಿಬಿಯಲ್ಲಿ ಮಹಿಳಾ ಕ್ರಿಕೆಟ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ಲೇರ್ ಕಾನರ್, ಐಲೀನ್ ನಿಧನಕ್ಕೆ ಸಂತಾಪ ಸೂಚಿಸಿ, "ನಮ್ಮ ಕ್ರೀಡೆ ಈ ಆದ್ಯ ಪ್ರವರ್ತಕರನ್ನು ಗೌರವಿಸುತ್ತಿದೆ. ಅವರಲ್ಲಿ ಐಲೀನ್ ಕೂಡಾ ಒಬ್ಬರು. ಅವರಿಗೆ ವಿದಾಯ ಹೇಳಲು ಅತೀವ ದುಃಖವಾಗುತ್ತಿದೆ" ಎಂದಿದ್ದಾರೆ.
"ಇಂಗ್ಲೆಂಡ್ ನಾಯಕಿ ಹೀಥರ್ ನೈಟ್ ಹಾಗೂ ನಾನು ಐಲೀನ್ ಅವರನ್ನು 2017ರ ಮಹಿಳಾ ವಿಶ್ವಕಪ್ಗೆ ಆರು ತಿಂಗಳ ಹಿಂದೆ ಭೇಟಿಯಾಗಿದ್ದೆವು. ಆಗ ಅವರಿಗೆ 105 ವರ್ಷ ವಯಸ್ಸಾಗಿತ್ತು. ಇದು ಅತ್ಯಂತ ಅವಿಸ್ಮರಣೀಯ ಅನುಭವ" ಎಂದು ಹೇಳಿದ್ದಾರೆ.
0 التعليقات: