Tuesday, 16 November 2021

ಭಾರಿ ಮಳೆ: ಕಳಸ- ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತ ಭೀತಿ


ಭಾರಿ ಮಳೆ: ಕಳಸ- ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತ ಭೀತಿ

ಬಾಳೆಹೊನ್ನೂರು: ಕಳಸ- ಬಾಳೆಹೊನ್ನೂರು ನಡುವಿನ ಮಹಾಲ್‌ಗೋಡಿನಲ್ಲಿ ಕಿರು ಸೇತುವೆಗೆ ಅಳವಡಿಸಿದ್ದ ಪೈಪ್ ಪಕ್ಕದ ಮರಳಿನ ಮೂಟೆಗಳು ಭಾರಿ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ಮುಖ್ಯರಸ್ತೆಯಲ್ಲಿರುವ ಮೋರಿ ಎರಡು ವಾರದ ಹಿಂದೆ ಭಾರಿ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು.ಕ್ಷಣ ಎಚ್ಚೆತ್ತ ಮೂಡಿಗೆರೆ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ತಾತ್ಕಾಲಿಕ ವಾಗಿ ಪೈಪ್ ಅಳವಡಿಸಿ ಹೋಗಿದ್ದರು. ನಂತರ ಮತ್ತೆ ಸುರಿದ ಮಳೆಗೆ ಆ ಮೋರಿ ಕೂಡ ಕೊಚ್ಚಿಕೊಂಡು ಹೋಗಿ ಕಳಸ-ಬಾಳೆಹೊನ್ನೂರು ನಡುವಿನ ಸಂಚಾರ ಸ್ಥಗಿತಗೊಂಡಿತ್ತು.

ಮತ್ತೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೋರಿಗೆ ಹೆಚ್ಚುವರಿಯಾಗಿ ಮೂರು ದೊಡ್ಡ ಪೈಪ್ ಗಳನ್ನು ಅಳವಡಿಸಿ ಅವುಗಳ ಪಕ್ಕದಲ್ಲಿ ಮರಳಿನ ಮೂಟೆಗಳನ್ನು ಇಟ್ಟಿದ್ದರು. ಸೋಮವಾರ ಸುರಿದ ಭಾರಿ ಮಳೆಗೆ ಪೈಪ್ ಬುಡದಲ್ಲಿ ಇಟ್ಟಿದ್ದ ಮರಳಿನ ಮೂಟೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇನ್ನೆರಡು ದಿನ ಇದೇ ರೀತಿ ಮಳೆ ಸುರಿದಲ್ಲಿ ಮತ್ತೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿದೆ.

'ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿ ಪದೇ ಪದೇ ಮೋರಿ ಕುಸಿತವಾಗುತ್ತಿದೆ. ತಾತ್ಕಾಲಿಕ ಮೋರಿ ನಿರ್ಮಾಣ ಕೈ ಬಿಟ್ಟು ಶಾಶ್ವತ ಕಾಮಗಾರಿ ನಡೆಸಬೇಕು. ಇಲ್ಲದಿದ್ದಲ್ಲಿ ವರ್ಷದಲ್ಲಿ ಹತ್ತಾರು ಬಾರಿ ಸಂಚಾರ ಸ್ಥಗಿತಗೊಳ್ಳುತ್ತಿದೆ. ತಕ್ಷಣ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ' ಎಂದು ಮಾಗುಂಡಿಯ ಪ್ರೆಮ್ ಕುಮಾರ್ ತಿಳಿಸಿದ್ದಾರೆ.



SHARE THIS

Author:

0 التعليقات: