Wednesday, 3 November 2021

ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆಯಾಗದಿದ್ದರೆ ಜನರಿಂದಲೇ ಉತ್ತರ: ಮಾಜಿ ಸಚಿವ ರಮಾನಾಥ ರೈ


 ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆಯಾಗದಿದ್ದರೆ ಜನರಿಂದಲೇ ಉತ್ತರ: ಮಾಜಿ ಸಚಿವ ರಮಾನಾಥ ರೈ

ಮಂಗಳೂರು: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದು, ಆಡಳಿತ ಪಕ್ಷದ ಜನಪ್ರತಿನಿಧಿಗಳಿಂದ ಇದರ ಸಮರ್ಥನೆ ಅಪಾಯಕಾರಿಯಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಲೆ ಏರಿಕೆ ಹಾಗೂ ಕೇಂದ್ರ ಹಾಗೂರಾಜ್ಯದ ಆಡಳಿತ ವೈಫಲ್ಯಕ್ಕೆ ಪ್ರತಿಯಾಗಿ ಈಗಾಗಲೇ ರಾಜ್ಯದಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಜನ ನೀಡಿರುವ ಪ್ರತಿಕ್ರಿಯೆಯಿಂದಲೇ ಸಾಬೀತಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಹೇಳುತ್ತಾ ಬಂದ ಬಿಜೆಪಿ ಪಕ್ಷಕ್ಕೆ ಜನರೇ ಮುಂದಿನ ದಿನಗಳಲ್ಲಿ ಉತ್ತರಿಸಲಿದ್ದಾರೆ. ಯಾರನ್ನು ಮುಕ್ತ ಮಾಡಬೇಕೆಂದು ಜನತೆ ತೀರ್ಮಾನಿಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ ಮಾಜಿ ಸಚಿವ ರೈ, ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಹಣಬಲ, ತೋಳ್ಬಲ ಪ್ರದರ್ಶಿಸಿರುವುದು ಮಾತ್ರವಲ್ಲದೆ, ಆಡಳಿತ ಯಂತ್ರವನ್ನೇ ಎರಡು ಕ್ಷೇತ್ರಗಳ ಚುನಾವಣೆಯ ಸಂದರ್ಭ ದುರುಪಯೋಗಪಡಿಸಿದ್ದಾರೆ. ಆದರೂ ಹಾನಗಲ್‌ನಲ್ಲಿ ಜನತೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕ್ಷೀಣಿಸಿದ್ದ ಕಾಂಗ್ರೆಸ್ ಬಲ ಈ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ವೃದ್ಧಿಸಲು ಸಹಕರಿಸಿದ್ದಾರೆ ಎಂದರು.

ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ, ಅಧಿಕಾರಕ್ಕೆ ಬಂದು 100 ದಿನಗಳಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ, ಕಪ್ಪು ಹಣ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಸುಳ್ಳುಗಳನ್ನೇ ಹೇಳುತ್ತಾ ಬಂದವರಿಗೆ ಇದೀಗ ಅವರದ್ದೇ ಭಾಷಣದ ತುಣುಕುಗಳನ್ನು ಮತ್ತೆ ನೆನಪಿಸಬೇಕಾದ ಕಾಲ ಬಂದಿದೆ. ನಿರಂತರವಾಗಿ ಸಾಗುತ್ತಿರುವ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ವೈಫಲ್ಯವನ್ನು ಮರೆಮಾಚಲು ಮತೀಯ ಭಾವನೆ ಕೆರಳಿಸುವ ಕಾರ್ಯದಲ್ಲಿ ಬಿಜೆಪಿ ಪಕ್ಷ ನಿರತವಾಗಿದೆ. ಇದನ್ನು ಬಿಟ್ಟು ಜನರ ಸಮಸ್ಯೆಗಳತ್ತ ಆಡಳಿತ ಪಕ್ಷದವರು ಗಮನ ಹರಿಸಬೇಕು. ಕೊರೋನ ಕಾರಣದಿಂದ ಬೆಲೆ ಏರಿಕೆ ಎಂಬುದಾಗಿ ಸಮರ್ಥಿಸುತ್ತಿರುವ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು, ಜಾಗತಿಕವಾಗಿ ಕೊರೋನದಿಂದ ತತ್ತರಿಸಿರುವಾಗ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದಂತಹ ಸಣ್ಣ ರಾಷ್ಟ್ರಗಳಲ್ಲಿ ತೈಲ ಬೆಲೆ ಹೆಚ್ಚಾಗದಿರಲು ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಭಾಸ್ಕರ ಕೆ., ಅಪ್ಪಿ, ಹರಿನಾಥ್, ನೀರಜ್ ಪಾಲ್, ಲುಕ್ಮಾನ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: