Wednesday, 17 November 2021

ಶರಣ್ ಪಂಪ್‌ವೆಲ್ ಬಹಿರಂಗ ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ: 'ಬಿರುವೆರ್ ಕುಡ್ಲ' ಎಚ್ಚರಿಕೆ


 ಶರಣ್ ಪಂಪ್‌ವೆಲ್ ಬಹಿರಂಗ ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ: 'ಬಿರುವೆರ್ ಕುಡ್ಲ' ಎಚ್ಚರಿಕೆ

ಉಡುಪಿ: ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿರುವ ‘ಬಿರುವೆರ್ ಕುಡ್ಲ’ ಸಂಘಟನೆಯ ಹೆಸರನ್ನು ಕೆಡಿಸುವ ಷಡ್ಯಂತ್ರವೊಂದು ನಡೆಯುತ್ತಿದೆ. ಸಂಘ ಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ಪೂರ್ಣ ಮಾಹಿತಿ ಅರಿಯದೆ ಸಂಘಟನೆ ಮೇಲೆ ಮಾಡಿರುವ ಆರೋಪ ನಮಗೆ ನೋವುಂಟು ಮಾಡಿದ್ದು, ಇದಕ್ಕಾಗಿ ಅವರು ಎರಡು ದಿನದೊಳಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಬಲ್ಲಾಳ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಬಿರುವೆರ್ ಕುಡ್ಲದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಉಡುಪಿ ಘಟಕದ ಅಧ್ಯಕ್ಷ ಕಿಶೋರ್ ಪೂಜಾರಿ ಹಾಗೂ ಮಾಧ್ಯಮ ವಕ್ತಾರ ತೇಜಸ್ ಜೆ.ಬಂಗೇರ, ನಮಗೂ ಕೂಡ ನಮ್ಮ ಸಂಘಟನೆಯ ಘನತೆ- ಗೌರವ ಉಳಿಸಿಕೊಳ್ಳುವ ಜವಾಬ್ದಾರಿಯಿದೆ ಎಂದರು.

ಬಿರುವೆರ್ ಕುಡ್ಲ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಟನೆಯಾಗಿದ್ದು, ಶರಣ್ ಪಂಪ್‌ವೆಲ್ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಏಕಾಏಕಿ ಬಿರುವೆರ್ ಕುಡ್ಲದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಯಾವುದೋ ಪ್ರತಿಭಟನೆಯ ಸಂದರ್ಭದಲ್ಲಿ ಬಿರುವೆರ್ ಕುಡ್ಲದ ಹೆಸರು ತೆಗೆಯುವ ಅಗತ್ಯವಿತ್ತೇ ಎಂದವರು ಪ್ರಶ್ನಿಸಿದರು.

ಬಿರುವೆರ್ ಕುಡ್ಲ ನಾರಾಯಣಗುರುಗಳ ತತ್ವಾದರ್ಶಗಳನ್ನು ಪಾಲಿಸುವ ಸಂಘಟನೆಯಾಗಿದ್ದು, ಇದು ಜಾತಿಬೇಧವನ್ನು ಮರೆತು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ನಮ್ಮ ಸಂಘಟನೆಯಲ್ಲಿ ಎಲ್ಲಾ ಜಾತಿ-ಧರ್ಮದವರಿದ್ದಾರೆ. ನಮ್ಮದು ಒಂದು ಜಾತಿ ಸಂಘಟನೆಯಲ್ಲ ಎಂದು ತೇಜಸ್ ಬಂಗೇರ ನುಡಿದರು.

ನಮ್ಮ ಉತ್ತಮ ಸಮಾಜ ಸೇವೆ ಕಂಡು ಸಹಿಸದ ಕೆಲವು ವ್ಯಕ್ತಿಗಳು ನಮ್ಮ ಸಂಘಟನೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿರುವೆರ್ ಕುಡ್ಲ ಇದನ್ನು ಸಹಿಸುವುದಿಲ್ಲ. ಒಂದೆರಡು ವ್ಯಕ್ತಿಗಳು ನಮ್ಮ ಸಂಘಟನೆ ಮೇಲೆ ವಿನಾಕಾರಣ ಆರೋಪ ಮಾಡಿದರೆ ಜನತೆ ನಂಬುವುದಿಲ್ಲ. ಯಾವುದೇ ಜಾತಿಮತವನ್ನು ನೋಡದೇ ನಾವು ಈವರೆಗೆ ಮೂರು ಕೋಟಿ ರೂ.ಗಳಿಗೂ ಅಧಿಕ ಧನಸಹಾಯವನ್ನು ಬಡವರಿಗೆ ನೀಡಿದ್ದೇವೆ. ಬಿರುವೆರ್ ಕುಡ್ಲದ ಸಮಾಜ ಸೇವೆ ಇನ್ನೂ ಮುಂದುವರಿಯಲಿದೆ ಎಂದರು.

ಆದುದರಿಂದ ಶರಣ್ ಪಂಪ್‌ವೆಲ್ ನಾಳೆ ಸಂಜೆಯೊಳಗೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸಂಘಟನೆಯ 22 ಘಟಕಗಳು ಸಮಾನ ಮನಸ್ಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಿದ್ದೇವೆ ಎಂದವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಡುಪಿ ಘಟಕದ ಉಪಾಧ್ಯಕ್ಷ ದಿನೇಶ್ ಅಮೀನ್, ಕಾರ್ಯದರ್ಶಿ ಯೋಗೀಶ್ ಅಮೀನ್, ಖಜಾಂಚಿ ರಾಜೇಶ್ ಕೊಪ್ಪ, ಸದಸ್ಯರಾದ ಮಂಜುನಾಥ, ಅಶೋಕ್, ಉದಯ, ವಿಶ್ವನಾಥ ಮುಂತಾ ದವರು ಉಪಸ್ಥಿತರಿದ್ದರು.


SHARE THIS

Author:

0 التعليقات: