ಬೀಜಿಂಗ್ ವಿಮಾನ ನಿಲ್ದಾಣದ ಫೋಟೋ ಬಳಸಿ ನೊಯ್ಡಾ ಏರ್ಪೋರ್ಟ್ ಕುರಿತ ವೀಡಿಯೋ ಟ್ವೀಟ್ ಮಾಡಿದ ಬಿಜೆಪಿ ನಾಯಕರು!
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ನಡುವೆ ಬಿಜೆಪಿಯ ಹಲವಾರು ನಾಯಕರು ಹಾಗೂ ಕೆಲ ಕ್ಯಾಬಿನೆಟ್ ಸಚಿವರು ಈ ವಿಮಾನ ನಿಲ್ದಾಣದ ಪ್ರಮೋಶನಲ್ ವೀಡಿಯೋ ಟ್ವೀಟ್ ಮಾಡಿದ್ದಾರೆ. ಆದರೆ ವಾಸ್ತವವಾಗಿ ಈ ವೀಡಿಯೋದಲ್ಲಿ ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವೊಂದನ್ನು ಬಳಸಲಾಗಿದೆ ಎಂದು ಫ್ಯಾಕ್ಟ್ ಚೆಕ್ ವೆಬ್ಸೈಟ್ಗಳು ಕಂಡುಕೊಂಡಿವೆ.
ಸರಕಾರದ MyGov ವೆಬ್ತಾಣದ ವಾಟರ್ ಮಾರ್ಕ್ ಹೊಂದಿದ ವೀಡಿಯೋವನ್ನು ಅಧಿಕೃತ ಟ್ವಿಟ್ಟರ್ ಹ್ಯಾಂಡಲ್- MyGovHindi ಕೂಡ ಟ್ವೀಟ್ ಮಾಡಿದೆ. ನಂತರ ವಾಸ್ತವ ತಿಳಿಯುತ್ತಲೇ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
'ಆಲ್ಟ್ ನ್ಯೂಸ್' ಸಹ ಸ್ಥಾಪಕ ಮುಹಮ್ಮದ್ ಝುಬೈರ್ ಅವರು ಮಾತನಾಡಿ, ನೊಯ್ಡಾ ವಿಮಾನ ನಿಲ್ದಾಣದ ಗ್ರಾಫಿಕ್ ಚಿತ್ರದಲ್ಲಿ ಇರುವ ಸ್ಟಾರ್ ಫಿಶ್ ವಿನ್ಯಾಸವು ಚೀನಾದ ರಾಜಧಾನಿ ಡೇಕ್ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದಾಗಿದೆ ಎಂದಿದ್ದಾರೆ.
ಬೀಜಿಂಗ್ನ ಈ ವಿಮಾನ ನಿಲ್ದಾಣವನ್ನು 2019ರಲ್ಲಿ ಉದ್ಘಾಟನೆಗೊಳಿಸಿದ ಸಂದರ್ಭ ಬ್ಲೂಂಬರ್ಗ್ ಖ್ವಿಂಟ್ ಟ್ವೀಟ್ ಮಾಡಿದ್ದ ವೀಡಿಯೋವನ್ನೂ ಅವರು ಶೇರ್ ಮಾಡಿದ್ದಾರೆ.
ಬಿಜೆಪಿ ನಾಯಕರು ಟ್ವೀಟ್ ಮಾಡಿದ ವೀಡಿಯೋದಲ್ಲಿನ ಫೋಟೋ ಡೇಕ್ಸಿಂಗ್ ವಿಮಾನ ನಿಲ್ದಾಣದ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ ಹಾಗೂ ಈ ಫೋಟೋವನ್ನು ದಿ ಗಾರ್ಡಿಯನ್ 2019ರಲ್ಲಿ ಪ್ರಕಟಿಸಿದ ಲೇಖನದಲ್ಲಿಯೂ ಬಳಸಲಾಗಿದೆ.
0 التعليقات: