Thursday, 11 November 2021

ಮಂಗಳೂರು: ಪದ್ಮಶ್ರೀ ಹಾಜಬ್ಬರಿಗೆ ಖಾಕಿ ಗೌರವ


 ಮಂಗಳೂರು: ಪದ್ಮಶ್ರೀ ಹಾಜಬ್ಬರಿಗೆ ಖಾಕಿ ಗೌರವ

ಮಂಗಳೂರು: ಇಂದಿನ ದಿನಗಳಲ್ಲಿ ಸಣ್ಣ ಪುಟ್ಟ ಪ್ರಶಸ್ತಿಗಾಗಿಯೂ ಬೆನ್ನತ್ತಿ ಹೋಗುವವರ ಎದುರು ತಮ್ಮ ಸಾಧನೆಯ ಮೂಲಕವೇ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿ ಪಡೆದ ಹಾಜಬ್ಬ ಆದರ್ಶ ವ್ಯಕ್ತಿ ಎಂದು ನಿವೃತ್ತ ಐಜಿಪಿ ಗೋಪಾಲ ಬಿ. ಹೊಸೂರು ಶ್ಲಾಘಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿ ಸಭಾಂಗಣದಲ್ಲಿ ‘ಪದ್ಮಶ್ರೀ’ ಪುರಸ್ಕೃತ ಹಾಜಬ್ಬ ಅವರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿಯ ವೇಷಭೂಷಣಕ್ಕಿಂತಲೂ ವ್ಯಕ್ತಿಯ ಮನಸ್ಸಿನ ಶಕ್ತಿಯನ್ನು ಗುರುತಿಸಬೇಕು. ಕಚೇರಿಗೆ ಶ್ರೀಮಂತರು, ಪ್ರಭಾವಿಗಳು ಬರುತ್ತಿರುತ್ತಾರೆ. ಆದರೆ ದೀನ ದಲಿತರು, ಅಲ್ಪಸಂಖ್ಯಾತರು, ನಿರ್ಗತಿಕರು ಬಂದಾಗ ಅವರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದ ಗೋಪಾಲ ಹೊಸೂರು, ಪೊಲೀಸರು ಕೇವಲ ಕಾನೂನು ಜಾರಿಗೆ ತರುವ ಕೆಲಸ ಮಾಡುವುದಷ್ಟೇ ಅಲ್ಲ, ಬದಲಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದಾಗ ಮಾತ್ರವೇ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಪೊಲೀಸರಿಗೆ ಸಲಹೆ ನೀಡಿದರು.

ಹಾಜಬ್ಬರ ಕುರಿತಂತೆ ಮಾತನಾಡಿದ ಹಿರಿಯ ಪತ್ರಕರ್ತರ ಗುರುವಪ್ಪ ಬಾಳೆಪುಣಿ, ಹಾಜಬ್ಬರಂತಹ ವ್ಯಕ್ತಿತ್ವ ಇನ್ನೊಂದು ಸಿಗುವುದು ಅಪರೂಪ ಎಂದು ಹಾಜಬ್ಬರ ಪರಿಚಯ, ಅವರ ಸರಳತೆಯ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು.

ಎಸಿಪಿ ಪಿ.ಎ. ಹೆಗಡೆಯವರು ನಿವೃತ್ತ ಐಜಿಪಿ ಗೋಪಾಲ ಹೊಸೂರು ಅವರ ಪರಿಚಯ ನೀಡಿದರು. ಎಸಿಪಿ ನಟರಾಜ್ ಕಾರ್ಯಕ್ರಮ ನಿರೂಪಿಸಿದರು.


SHARE THIS

Author:

0 التعليقات: