Thursday, 4 November 2021

ತ್ರಿಪುರಾ ಹಿಂಸಾಚಾರ: ಸತ್ಯಶೋಧನಾ ತಂಡದ ಇಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿದ ಪೊಲೀಸರು

 

ತ್ರಿಪುರಾ ಹಿಂಸಾಚಾರ: ಸತ್ಯಶೋಧನಾ ತಂಡದ ಇಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿದ ಪೊಲೀಸರು

ಹೊಸದಿಲ್ಲಿ: ತ್ರಿಪುರಾದಲ್ಲಿ ಇತ್ತೀಚೆಗೆ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಹಿಂಸೆಯ ಕುರಿತಂತೆ  ಸತ್ಯಶೋಧನಾ ವರದಿಯೊಂದು ಬಿಡುಗಡೆಯಾದ ಬೆನ್ನಲ್ಲೇ ಸತ್ಯಶೋಧನಾ ತಂಡದ ಭಾಗವಾಗಿದ್ದ ಇಬ್ಬರು ವಕೀಲರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಸೆಕ್ಷನ್ 13 ಅನ್ವಯ ಪ್ರಕರಣ ದಾಖಲಾಗಿದೆ.

ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಕಾರ್ಯದರ್ಶಿ ಅನ್ಸಾರ್ ಇಂದೋರಿ ಹಾಗೂ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‍ನ ಮುಕೇಶ್ ಅವರ ವಿರುದ್ಧ ಈ ಕಾಯಿದೆಯಡಿ ಪ್ರಕರಣ ಹೊರತಾಗಿ ಐಪಿಸಿ ಯ ಸೆಕ್ಷನ್ 120 (ಬಿ), 153(ಎ), 153 (ಬಿ). 469. 471. 503, 504 ಅನ್ವಯ ಕ್ರಿಮಿನಲ್ ಸಂಚು, ದ್ವೇಷ ಹರಡುವಿಕೆ, ಫೋರ್ಜರಿ ಹಾಗೂ ಶಾಂತಿ ಕದಡುವ ಆರೋಪ ಹೊರಿಸಲಾಗಿದೆ.

ತ್ರಿಪುರಾಗೆ ಅಕ್ಟೋಬರ್ 29-30ರಂದು ಭೇಟಿಯಾಗಿದ್ದ ನಾಲ್ಕು ಸದಸ್ಯರ ಸತ್ಯಶೋಧನಾ ತಂಡದಲ್ಲಿ ಈ ಇಬ್ಬರು ಇದ್ದರು. "ಹ್ಯುಮಾನಿಟಿ ಅಂಡರ್ ಅಟ್ಯಾಕ್ ಇನ್ ತ್ರಿಪುರಾ; #ಮುಸ್ಲಿಂ ಲೈವ್ಸ್ ಮ್ಯಾಟರ್" ಎಂಬ ಈ ವರದಿಯು ರಾಜ್ಯದಲ್ಲಿ ಕನಿಷ್ಠ 12 ಮಸೀದಿಗಳು ಹಾಗೂ ಮುಸ್ಲಿಂ ಕುಟುಂಬಗಳಿಗೆ ಸೇರಿದ ಒಂಬತ್ತು ಮಳಿಗೆಗಳು ಹಾಗೂ ಮೂರು ಮನೆಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿತ್ತು.

ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ಈ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟುಗಳು ಪ್ರಚೋದನಕಾರಿ ಹಾಗೂ ವಿವಿಧ ದಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುತ್ತವೆ ಎಂದು ಆರೋಪಿಸಲಾಗಿದೆ.

ಸತ್ಯಶೋಧನಾ ವರದಿಯನ್ನು ಈ ಇಬ್ಬರು ಹೊರತುಪಡಿಸಿ ಸುಪ್ರೀಂ ಕೋರ್ಟ್ ವಕೀಲರುಗಳಾದ ಎಹ್ತೇಶಮ್ ಹಶ್ಮಿ ಮತ್ತು ಅಮಿತ್ ಶ್ರೀವಾಸ್ತವ ಅವರು ಸಿದ್ಧಪಡಿಸಿದ್ದರಲ್ಲದೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಹಿಂಸೆ ಆಡಳಿತದ ಬೇಜವಾಬ್ದಾರಿಯಿಂದ ಹಾಗೂ ತೀವ್ರಗಾಮಿ ಸಂಘಟನೆಗಳಿಂದ ನಡೆದಿದೆ ಎಂದು ಹೇಳಿತ್ತು.


SHARE THIS

Author:

0 التعليقات: