Wednesday, 24 November 2021

ರಾಜ್ಯದ ಅತಿ ಶ್ರೀಮಂತ ರಾಜಕಾರಣಿ ಯೂಸುಫ್ ಶರೀಫ್.


ರಾಜ್ಯದ ಅತಿ ಶ್ರೀಮಂತ ರಾಜಕಾರಣಿ ಯೂಸುಫ್ ಶರೀಫ್.

ಬೆಂಗಳೂರು: ವಿಧಾನ ಪರಿಷತ್‌ಗೆ ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿರುವ ಯೂಸುಫ್ ಶರೀಫ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 1,744 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದು, ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್)ನಲ್ಲಿ ಹುಟ್ಟಿದ ಶರೀಫ್, ಗುಜುರಿಬಾಬು ಅಥವಾ ಸ್ಕ್ರಾಪ್ ಬಾಬು ಎಂದು ಕರೆಯಲ್ಪಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಧುಮುಕಿದ್ದರು.

ಇದೀಗ ಮಿಲ್ಲರ್ಸ್‌ ಟ್ಯಾಂಕ್ ಬಂಡ್ ನಿವಾಸಿಯಾಗಿರುವ ಶರೀಫ್ (54), ಬೆಂಗಳೂರು ಸ್ಥಳೀಯ ಸಂಸ್ಥೆಗಳ ಸ್ಥಾನದಿಂದ ಡಿಸೆಂಬರ್ 10ರಂದು ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರ ಹೆಸರನ್ನು ಅಧಿಕೃತವಾಗಿ ಘೋಷಿಸುವವರೆಗೆ ಕಾಂಗ್ರೆಸ್‌ನಲ್ಲೇ ಕೆಲವು ಮಂದಿ ಮಾತ್ರ ಇವರ ಬಗ್ಗೆ ತಿಳಿದಿದ್ದರು.

ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್‌ನ ಪ್ರಕಾರ ಶರೀಫ್ ಅವರಿಗೆ ಇಬ್ಬರು ಪತ್ನಿಯರು ಮತ್ತು ಐವರು ಮಕ್ಕಳು. ಇವರು ಒಟ್ಟು 1,744 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಷರೀಫ್ ಅವರೇ ಸ್ವತಃ 1640 ಕೋಟಿ ರೂಪಾಯಿ ಮೌಲ್ಯದ ಭೂಮಿ ಹೊಂದಿದ್ದಾರೆ. ಇದರಲ್ಲಿ ಕೃಷಿಭೂಮಿಯೇ ಅಧಿಕ. ಶರೀಫ್ ಅವರ ಘೋಷಿತ ಆಸ್ತಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (2018ರಲ್ಲಿ 840 ಕೋಟಿ ರೂಪಾಯಿ), ಬಿಜೆಪಿ ಎಂಎಲ್‌ಸಿ ಎಂ.ಟಿ.ಬಿ.ನಾಗರಾಜ್ (2020ರಲ್ಲಿ 880 ಕೋಟಿ) ಅವರ ಆಸ್ತಿಗಿಂತಲೂ ಅಧಿಕ.

ಐದನೇ ತರಗತಿವರೆಗೆ ಓದಿದ್ದ ಶರೀಫ್, ಉಮ್ರಾ ಡೆವಲಪರ್ಸ್‌ ಎಂಬ ರಿಯಾಲ್ಟಿ ಕಂಪನಿಯ ಮಾಲಕ. ಇತರ ಐದು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಅವರು ಪಾಲು ಹೊಂದಿದ್ದಾರೆ. ಇವರು 12 ಬ್ಯಾಂಕ್ ಖಾತೆಗಳಲ್ಲಿ 67 ಕೋಟಿ ರೂಪಾಯಿಗಳ ಹೊಣೆಗಾರಿಕೆ ಘೋಷಿಸಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರವೇ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 13.43 ಕೋಟಿ ರೂಪಾಯಿ ಬಾಕಿ ತೆರಿಗೆ ವಿಧಿಸಿದ್ದರು. ಇದರ ವಿರುದ್ಧ ಆದಾಯ ತೆರಿಗೆ ಆಯುಕ್ತರ ಎದುರು ಮನವಿ ಸಲ್ಲಿಸಿದ್ದು, ಅದನ್ನು ಸ್ವೀಕರಿಸಲಾಗಿದೆ. ಪ್ರಕರಣದ ವಿಚಾರಣೆ ಇನ್ನೂ ನಡೆಯಬೇಕಿದೆ.

ಶರೀಫ್ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳು ಕೂಡಾ ಬಾಕಿ ಇವೆ. ಇವರು 2.01 ಕೋಟಿ ರೂ. ಮೌಲ್ಯದ ರೋಲ್ಸ್ ರೋಯ್ಸ್ ಕಾರು ಹಾಗೂ 49 ಲಕ್ಷ ರೂಪಾಯಿ ಮೌಲ್ಯದ ಎರಡು ಫಾರ್ಚುನರ್ ಕಾರುಗಳನ್ನು ಹೊಂದಿದ್ದಾರೆ.

ಇಷ್ಟೊಂದು ಶ್ರೀಮಂತರಾದದ್ದು ಹೇಗೆ ಎಂದು ಕೇಳಿದ ಪ್ರಶ್ನೆಗೆ, ಇದನ್ನು ಆದಾಯ ತೆರಿಗೆ ಅಧಿಕಾರಿಗಳು ಕೇಳಿದರೆ ಉತ್ತರಿಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದರು.SHARE THIS

Author:

0 التعليقات: