ಯಾವುದೆ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಸಚಿವ ಭೈರತಿ ಬಸವರಾಜ
ಬೆಂಗಳೂರು: ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವವರು ಪುನಃ ಪಕ್ಷಕ್ಕೆ ಬಂದಲ್ಲಿ ಸೇರಿಸಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಯಾವುದೆ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್ನಲ್ಲಿ ಸುಮಾರು 20 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಚಿನ್ಹೆಯಡಿಯಲ್ಲೆ ನಾನು ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುತ್ತೇನೆ ಎಂಬುದೆಲ್ಲ ಊಹಾಪೋಹ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಸೇರ್ಪಡೆಯಾಗುವಂತೆ ಯಾರು ಆಹ್ವಾನ ನೀಡಿದ್ದಾರೋ ಗೊತ್ತಿಲ್ಲ. ಆದರೆ, ನಾನು ಈಗ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ವರಿಷ್ಠರ ಆದೇಶದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಮುಂದಿನ ಚುನಾವಣೆಯಲ್ಲೂ ಬಿಜೆಪಿಯಿಂದಲೆ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಲು ಆದ್ಯತೆ ನೀಡಿದ್ದೇನೆ ಎಂದು ಅವರು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಎದುರಿಸಲು ನಾವು ನಮ್ಮ ಮುಖಂಡರು, ಕಾರ್ಯಕರ್ತರು ಸರ್ವಸನ್ನದ್ಧವಾಗಿದ್ದೇವೆ. ಯಾವುದೆ ಸಂದರ್ಭದಲ್ಲಿ ಚುನಾವಣೆ ಆದರೂ ಪಕ್ಷ ಸಿದ್ಧವಾಗಿದ್ದು, ಈಗಾಗಲೆ ಅದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಬಸವರಾಜ ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎಂ.ಎನ್.ಶ್ರೀಕಾಂತ್, ಕ್ಷೇತ್ರದ ಎಸ್ಸಿ ಮೋರ್ಚಾ ಅಧ್ಯಕ್ಷ ಸಂಪತ್, ಮುಖಂಡರಾದ ನಗರೇಶ್ವರ ನಾಗೇನಹಳ್ಳಿ ಲೋಕೇಶ್, ಚಿದಾನಂದ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
0 التعليقات: