Tuesday, 23 November 2021

ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ


ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು,: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಹವಾಮಾನ ವೈಪರೀತ್ಯದಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಮಳೆ, ಚಳಿ, ಗಾಳಿ ಪ್ರಮಾಣ ಹೆಚ್ಚಾದ ಪರಿಣಾಮ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ಆದುದರಿಂದ ತರಕಾರಿ ಬೆಲೆ ಗಗನಕ್ಕೇರಿ ಗ್ರಾಹಕರು ಕಂಗಾಲಾಗಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಬಹುತೇಕ ಎಲ್ಲ ಕಡೆ ತರಕಾರಿ ಬಲೆ ಗಗನಕ್ಕೇರಿದೆ. ಟೊಮೇಟೊ ಕೆ.ಜಿ.ಗೆ 80-100 ರೂ.ಗೆ ಏರಿಕೆಯಾಗಿದೆ. ಬೀನ್ಸ್-ಕ್ಯಾರೆಟ್ ಕೆಜಿಗೆ ಬೆಲೆ 80 ರೂ.ದಾಟಿದೆ. ಬದನೆಕಾಯಿ 80 ರೂ. ಇದೆ. ಗೋರಿಕಾಯಿ-ಸೀಮೆ ಬದನೆಕಾಯಿ-ಚಪ್ಪರದವರೆಕಾಯಿ 80 ರೂ., ಹಿರೇಕಾಯಿ-ಕುಂಬಳಕಾಯಿ 80ರೂ., ಬೆಂಡೆಕಾಯಿ 60ರೂ., ಈರುಳ್ಳಿ 40-50ರೂ., ಸವತೆಕಾಯಿ-40ರೂ., ಕೊತ್ತಂಬರಿ ಸೊಪ್ಪು ಒಂದು ಕಟ್ 30ರೂ., ಪಾಲಕ್ 30ರೂ., ಮೆಂತ್ಯ 20 ರೂ. ಆಗಿದೆ. 10 ರೂ.ಗೆ 2 ನಿಂಬೇ ಹಣ್ಣು ಮಾರಾಟವಾಗುತ್ತಿದೆ. ಮಳೆ ಇನ್ನಷ್ಟು ದಿನ ಮುಂದುವರಿದರೆ ತರಕಾರಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ತರಕಾರಿ ಮಾರುಕಟ್ಟೆಗೆ ಹೋದರೆ ಹೆಚ್ಚಿನ ಹಣ ಕೊಟ್ಟರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಕಳಪೆ ಗುಣಮಟ್ಟದ ತರಕಾರಿಯನ್ನು ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವಂತಾಗಿದೆ. ಹೀಗಾಗಿ ಗ್ರಾಹಕರು ಅಳೆದು ತೂಗಿ ತರಕಾರಿ ಖರೀದಿಸುತ್ತಿದ್ದಾರೆ. ಇನ್ನು ಮಳೆ ನಡುವೆಯೂ ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುತ್ತಿರುವ ರೈತರಿಗೂ ಹೆಚ್ಚಿನ ಲಾಭ ಸಿಗದೆ, ಮಧ್ಯವರ್ತಿಗಳ, ದಳ್ಳಾಳಿಗಳ ಪಾಲಾಗುತ್ತಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಸದಾಗಿ ತರಕಾರಿ ಬೆಳೆ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಅಗತ್ಯ ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ರೈತರು ತರಕಾರಿ ಬೆಳೆದರೂ ಹೆಚ್ಚಿನ ಪ್ರಯೋಜನವಾಗದೇ, ಬೆಳೆದ ಬೆಳೆಯೆಲ್ಲ ಮಳೆಯಿಂದ ಹಾಳಾಗುತ್ತಿದೆ. ಬೆಳೆಯನ್ನು ರಕ್ಷಿಸಿಕೊಳ್ಳಲು ಇನ್ನಷ್ಟು ಶ್ರಮ ಹಾಗೂ ಹಣ ಖರ್ಚು ಮಾಡುವಂತಾಗಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೆ ಹೊರೆಯಾಗುತ್ತಿದೆ.


ಇನ್ನು ಎಲ್ಲರೂ ಅತಿ ಹೆಚ್ಚು ಬಳಸುವ ಈರುಳ್ಳಿ, ಮಳೆಯಿಂದ ತೇವಾಂಶ ಹೆಚ್ಚಿ ಕೆಡುತ್ತಿದೆ.  ಸಂಗ್ರಹಿಸಿಡಲಾದ ಕಡೆಯೇ ಗಾಳಿ ಆಡದೆ ದುರ್ನಾತ ಬೀರುತ್ತಿದೆ. ಈರುಳ್ಳಿ ಸಂಗ್ರಹಿಸಿದ ಕೂಡಲೇ ಅವುಗಳನ್ನು ಬೇರ್ಪಡಿಸಿ, ಮಾರುಕಟ್ಟೆಗೆ ಸಾಗಿಸಬೇಕು. ಆದರೆ ವಾರದಿಂದ ಸುರಿಯುತ್ತಿರುವ ಮಳೆ ಈಗ ಸ್ವಲ್ಪ ಬಿಡುವು ಕೊಟ್ಟರೂ, ಈರುಳ್ಳಿ ಕೆಟ್ಟು ಕಸಕ್ಕೆ ಸುರಿಯಬೇಕಾಗಿದೆ ಎಂದು ಈರುಳ್ಳಿ ಬೆಳೆದವರು ಹಾಗೂ ಸಂಗ್ರಹಿಸಿದವರು ಚಿಂತೆಗೀಡಾಗಿದ್ದಾರೆ.


 SHARE THIS

Author:

0 التعليقات: