Friday, 19 November 2021

ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ: ಬಿ.ಎಸ್.ಯಡಿಯೂರಪ್ಪ


 ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ: ಬಿ.ಎಸ್.ಯಡಿಯೂರಪ್ಪ

ಧಾರವಾಡ: ಹಣ ಬಲ, ತೋಳ ಬಲ, ಅಧಿಕಾರ ಬಲ, ಜಾತಿ ವಿಷಬೀಜ ಬಿತ್ತಿ ಚುನಾವಣೆಯನ್ನು ಗೆಲ್ಲುತ್ತಿದ್ದ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿದೆ. ಇನ್ನೊಂದೆಡೆ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶವನ್ನು ಇನ್ನು ಮುಂದೆಯೂ ಆಳಲಿದೆ. ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ಧಾರವಾಡದಲ್ಲಿ ನಡೆದ ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ಚುನಾವಣೆ ನೆಪಮಾತ್ರಕ್ಕೆ ಆಗಿದ್ದರೂ ನಾವು ಬಹುಮತ ಪಡೆಯಬೇಕಿದೆ. ಅದಕ್ಕಾಗಿ ಹೆಚ್ಚು ಸೀಟು ಗೆಲ್ಲುವುದು ಅನಿವಾರ್ಯ. ಬಿಜೆಪಿಗೆ ಮತ ನೀಡಲು ಹಿಂದೆ ಮುಂದೆ ನೋಡುವವರನ್ನು ನಮ್ಮ ಅಭ್ಯರ್ಥಿಗೆ ಮತ ಕೊಡಿಸಲು ಮುಂದಾಗಿ ಎಂದು ಮನವಿ ಮಾಡಿದರು.

ಇಡೀ ಪ್ರಪಂಚ ನರೇಂದ್ರ ಮೋದಿಯವರತ್ತ ನೋಡಿ ಅವರ ನಿರ್ಧಾರಗಳನ್ನು ಸ್ವಾಗತಿಸಿ ಗೌರವಿಸುತ್ತಿದೆ. ಅಂಥ ಧೀಮಂತ ನಾಯಕನ ಪಕ್ಷದ ಸದಸ್ಯರು ನಾವೆಂದು ಹೆಮ್ಮೆ ಪಡಿ. ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ಭಾಗದಲ್ಲಿ 7,500 ಮತಗಳ ಪೈಕಿ 5 ಸಾವಿರಕ್ಕೂ ಹೆಚ್ಚು ಮತದಾರರು ಬಿಜೆಪಿಯನ್ನು ಬೆಂಬಲಿಸುವಂತಾಗಬೇಕು. ಮಹಿಳಾ ಸಬಲೀಕರಣ, ಗುಡಿ ಕೈಗಾರಿಕೆ ಮಾಡಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಶಕ್ತಿ ನಮ್ಮ ತಾಯಂದಿರಿಗೆ ಬರಬೇಕೆಂಬ ಆಶಯ ನಮ್ಮ ಪ್ರಧಾನಿದು. ಸರಕಾರದ ಸಾಲ ಯೋಜನೆಯ ಪ್ರಯೋಜನ ಪಡೆದು ಮಹಿಳೆಯರು ಸ್ವಾವಲಂಬಿ ಆಗಬೇಕೆಂದು ಅವರು ತಿಳಿಸಿದರು.

ಇವತ್ತು ಐತಿಹಾಸಿಕ ದಿನ. ಸುಮಾರು ಒಂದು ವರ್ಷದಿಂದ ರೈತರು ಸತ್ಯಾಗ್ರಹ ನಡೆಸುತ್ತಿದ್ದು, ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವ ಪ್ರಮುಖ ನಿರ್ಧಾರವನ್ನು ಪ್ರಧಾನಿ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಯಡಿಯೂರಪ್ಪ ತಿಳಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರೈತರು, ಬಡವರ ಸಂಕಷ್ಟಗಳನ್ನು ಆಲಿಸಲು ಯಡಿಯೂರಪ್ಪ ನೇತೃತ್ವದಲ್ಲಿ ಬಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೃಷಿ ಸುಧಾರಣಾ 3 ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದ ಅಭಿವೃದ್ಧಿ, ದೀನದಲಿತರ ಕಲ್ಯಾಣಕ್ಕಾಗಿ, ರೈತರ ಏಳಿಗೆಗಾಗಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಆಡಳಿತದಲ್ಲಿ 18 ಸಾವಿರ ಹಳ್ಳಿಗಳು ವಿದ್ಯುತ್ ಸಂಪರ್ಕವಿಲ್ಲದೆ ಇದ್ದವು. ಮೋದಿ ಈ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಿದರು. ಆದಿವಾಸಿಗಳ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಅವರು ವಿವರಿಸಿದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯೊಂದಿಗೆ ಮೋದಿ ದೇಶವನ್ನು ಅಭಿವೃದ್ಧಿ ಪಡಿಸಿದ್ದಾರೆ. 100 ಕೋಟಿ ಕೋವಿಡ್ ಲಸಿಕೆ ನೀಡಿಕೆ, 80 ಕೋಟಿ ಜನರಿಗೆ ಕೋವಿಡ್ ಅವಧಿಯಲ್ಲಿ ಪಡಿತರ ನೀಡಿದ್ದು, ಕುಡಿಯುವ ನೀರಿನ ಸೌಕರ್ಯವನ್ನು ಎಲ್ಲರಿಗೂ ನೀಡಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಗೋವಿಂದ ಕಾರಜೋಳ ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಶ್ರೀರಾಮುಲು, ಶಂಕರ ಪಾಟೀಲ್ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ವಿಭಾಗ ಪ್ರಭಾರಿ ಲಿಂಗರಾಜ್ ಪಾಟೀಲ್, ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


SHARE THIS

Author:

0 التعليقات: