ತಗ್ಗಿದ ಅಕಾಲಿಕ ಮಳೆಯ ಅಬ್ಬರ, ಚಳಿ ಆರಂಭ
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿದಿದ್ದ ಅಕಾಲಿಕ ಮಳೆಯ ಅಬ್ಬರ ಇಂದು ಭಾಗಶಃ ತಗ್ಗಲಿದೆ. ಇಂದು ಸಹ ಮೋಡ ಕವಿದ ವಾತಾವರಣದ ಜೊತೆ ಎಳೆಯ ಬಿಸಿಲು ಬೀಳಲಿದೆ. ಭಾನುವಾರದಿಂದಲೇ ರಾಜ್ಯದಲ್ಲಿ ಮಳೆ (Rain) ಪ್ರಮಾಣ ಕಡಿಮೆಯಾಗಿದ್ದು, ಅದು ಸೃಷ್ಟಿಸಿದ ಅವಾಂತರಗಳು ನಿಂತಿಲ್ಲ.
ಭಾನುವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು (Bengaluru Rains) ಮುಳಗಡೆಯಾಗಿದ್ದು, ರಸ್ತೆಗಳು ಕೆರೆಗಳಾಗಿ ಬದಲಾಗಿದ್ದವು. ಸೋಮವಾರ ಸಹ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ತುಂತುರು ಮಳೆಯಾಗಿತ್ತು. ಇಂದು ಸಹ ಮಳೆಯ ಸಿಂಚನ ಆಗುವ ಸಾಧ್ಯತೆಗಳಿವೆ.
ನಗರಗಳ ತಾಪಮಾನ
ಬೆಂಗಳೂರು 26-19, ಶಿವಮೊಗ್ಗ 21-20, ಹಾಸನ 27-18, ಮೈಸೂರು 29-20, ಚಿಕ್ಕಬಳ್ಳಾಪುರ 26-17, ಉಡುಪಿ 31-24, ಮಂಗಳೂರು 31-24, ಉತ್ತರ ಕನ್ನಡ 31-21, ದಾವಣಗೆರೆ 30-21, ಧಾರವಾಡ 39-21, ಗದಗ 29-21, ಹಾವೇರಿ 31-21, ಬೆಳಗಾವಿ 29-19, ರಾಯಚೂರು 31-23, ಬಳ್ಳಾರಿ 30-22, ಬಾಗಲಕೋಟೆ 31-22, ವಿಜಯಪುರ 29-22, ಕಲಬುರಗಿ 30-22 ಮತ್ತು ಯಾದಗಿರಿ 31-23 ತಾಪಮಾನ ದಾಖಲಾಗಲಿದೆ. ರಾಯಚೂರು ಮತ್ತು ಬಳ್ಳಾರಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ತುಂತುರು ಮಲೆಯಾಗಲಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಕೊಡಗು, ಮಂಡ್ಯದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ.
ಯಲಹಂಕದ ಜಕ್ಕೂರು ರಸ್ತೆ ಜಲಾವೃತವಾಗಿತ್ತು. ಜಕ್ಕೂರು ರಸ್ತೆಯ ಸುರಭಿ ಲೇಔಟ್ ಗೆ ಮಳೆ ನೀರು ನುಗ್ಗಿದ ಪರಿಣಾಮ ಜನರು ಜಾಗರಣೆ ಮಾಡುವಂತಾಗಿತ್ತು. ರಾಜಕಾಲುವೆ ತುಂಬಿ ರಸ್ತೆಯಲ್ಲಿ ಎರಡು ಅಡಿ ನೀರು ಹರಿದಿದೆ. ಮೊಣಕಾಲುದ್ದದ ನೀರಿನಲ್ಲೇ ಜನರು ನಡೆದುಕೊಂಡು ಹೋಗುತ್ತಿದ್ರೆ, ಮತ್ತೊಂದು ಕಡೆ ಗುಂಡಿಗಳ ಆತಂಕದಲ್ಲಿ ವಾಹನಗಳನ್ನು ತಳ್ಳಿಕೊಂಡೇ ಸವಾರರು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೋಗಿಲು ಕ್ರಾಸ್ ಬಳಿ ರಸ್ತೆ ತುಂಬ ನೀರು ನಿಂತಿದ್ದರಿಂದ ಸಂಪರ್ಕ ಕಡಿತವಾಗಿದೆ. ಕೋಗಿಲು ಕ್ರಾಸ್ ನ ಸಪ್ತಗಿರಿ ಲೇಔಟ್ ನಲ್ಲಿರೋ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೂ ನೀರು ನುಗ್ಗಿದೆ. ಅಪಾರ್ಟ್ ಮೆಂಟ್ ಬೇಸ್ಮೆಂಟ್ ಗಳಿಗೂ ನೀರು ನುಗ್ಗಿದ್ದರಿಂದ ವಾಹನಗಳು ಮುಳಗಡೆಯಾಗಿವೆ.
ರಾಜಧಾನಿಯಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ ರಸ್ತೆಗಳು ಬಾಯ್ಬಿಟ್ಟಿದ್ದು, ರಸ್ತೆ ಗುಂಡಿಗಳು ಮೃತ್ಯು ಕೂಪಗಳಾಗಿವೆ. ಅಪಘಾತಗಳಿಗೆ ಕಾರಣವಾಗುವ ಅಸಂಖ್ಯಾತ ಗುಂಡಿಗಳಿಂದ ಬೇಸತ್ತ ನಗರದ ನಾಗರಿಕರು ಬಿಬಿಎಂಪಿಯ ನಿರ್ಲಕ್ಷ್ಯ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಿರಂತರ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕ ಸಂದೇಶ ನೀಡಲಾಗಿದೆ. ಇತ್ತ ಜಲಾಶಯಗಳಿಂದ ನೀರು ಬಿಡುಗಡೆ ಆಗುತ್ತಿರುವ ಕೃತಕ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗೆ ಭತ್ತ ನೆಲಕಚ್ಚಿದೆ. ಭತ್ತದ ಬೆಳೆ ಕಾಳು ಕಟ್ಟುವ ಸಮಯ ಇದಾಗಿದ್ದು, ಗದ್ದೆಗಳಲ್ಲಿ ನೀರಿನ ಅಂಶ ಕಡಿಮೆ ಇರಬೇಕಾಗಿತ್ತು. ಆದರೆ ತೀವ್ರ ಮಳೆ ಸುರಿಯುತ್ತಿರುವುದರಿಂದ ನೀರಿನ ಅಂಶ ಜಾಸ್ತಿಯಾಗಿ ಭತ್ತ ಸಂಪೂರ್ಣ ಜೊಳ್ಳಾಗುತ್ತಿದೆ. ಇದರಿಂದ ಮುಂದಿನ ಒಂದು ವರ್ಷದ ಜೀವನಕ್ಕೆ ಏನು ಮಾಡಬೇಕು ಎನ್ನೋ ಚಿಂತೆಗೆ ರೈತರು ಬಿದ್ದಿದ್ದಾರೆ.
0 التعليقات: